ಸುಳ್ಯ: ಗಡಿ ಗ್ರಾಮಗಳನ್ನು ರಹದಾರಿಯಾಗಿಸಿ ಕೇರಳದಿಂದ ಕರ್ನಾಟಕಕ್ಕೆ, ಕರ್ನಾಟಕದಿಂದ ಕೇರಳಕ್ಕೆ ‘ಮ್ಯಾರಥಾನ್’ ನಡೆಸುವ ಕಾಡಾನೆಗಳ ಹಿಂಡು ಈಗ ಸುಳ್ಯ-ಕಾಸರಗೋಡು ಅಂತರರಾಜ್ಯ ಹೆದ್ದಾರಿಯನ್ನು ತಮ್ಮ 'ಕಾರಿಡಾರ್' ಮಾಡಿಕೊಂಡಿವೆ. ಶುಕ್ರವಾರ ರಾತ್ರಿ ಮುಳ್ಳೇರಿಯ ಸಮೀಪದ ಕರ್ಮಂತೋಡಿ ಎಂಬಲ್ಲಿ ಕಾಡಾನೆಗಳ ಹಿಂಡು ನಡು ಮಧ್ಯ ರಸ್ತೆಯಲ್ಲಿಯೇ ಕಾಣಿಸಿಕೊಂಡು ಹಲವು ಸಮಯ ಭೀತಿ ಹುಟ್ಟಿಸಿದ್ದವು. ರಾತ್ರಿಯಾಗುತ್ತಿದ್ದಂತೆ ಅಂತಾರಾಜ್ಯ ಹೆದ್ದಾರಿಯಲ್ಲಿ ಕಾಡಾನೆಗಳ ಹಿಂಡು ಹಲವು ಬಾರಿ ಪ್ರತ್ಯಕ್ಷವಾಗಿದೆ. ಶುಕ್ರವಾರ ರಾತ್ರಿ ಎರಡು ಮರಿ ಆನೆಗಳು ಸೇರಿದಂತೆ ಏಳು ಆನೆಗಳ ಹಿಂಡು ರಾಜ್ಯ ಹೆದ್ದಾರಿಯಲ್ಲಿ ಒಂದು ಗಂಟೆಗೂ ಹೆಚ್ಚು ಭೀತಿ ಹುಟ್ಟಿಸಿದ್ದವು.
ಸುಳ್ಯ ಕಾಸರಗೋಡು ಅಂತರರಾಜ್ಯ ರಸ್ತೆಯು ಬಹುತೇಕ ಭಾಗ ಸುತ್ತಲೂ ಅರಣ್ಯ ಆವೃತ್ತವಾಗಿದೆ. ತಿರುವುಗಳಿಂದ ಕೂಡಿದ ರಸ್ತೆಯಲ್ಲಿ ರಾತ್ರಿ ಹಗಲೆನ್ಬದೆ ನೂರಾರು ವಾಹನಗಳು ಸಂಚರಿಸುತ್ತಲೇ ಇರುತ್ತವೆ. ಇದೀಗ ಕಾಡಾನೆಗಳ ಹಿಂಡು ಪದೇ ಪದೇ ಕಾಣಿಸಿಕೊಳ್ಳುವುದು ಪ್ರಯಾಣಿಕರಲ್ಲಿ ಆತಂಕ ಸೃಷ್ಠಿಸಿದೆ. ಜಾಲ್ಸೂರು-ಮುಳ್ಳೇರಿಯಾ ಹೆದ್ದಾರಿಯಲ್ಲಿ ಗಜಪಡೆಗಳು ವಿಹರಿಸುತ್ತಿರುವುದು ಹಲವು ಬಾರಿ ವಾಹನ ಪ್ರಯಾಣಿಕರಿಗೆ ಕಂಡು ಬಂದಿದೆ.
ಸುಳ್ಯ-ಕಾಸರಗೋಡು ರಸ್ತೆ ಮಾತ್ರವಲ್ಲದೆ ಸುಳ್ಯ-ಮಂಡೆಕೋಲು- ಅಡೂರು, ಸುಳ್ಯ-ಕಲ್ಲಪಳ್ಳಿ- ಪಾಣತ್ತೂರು ಅಂತಾರಾಜ್ಯ ರಸ್ತೆಯಲ್ಲಿಯೂ ರಾತ್ರಿಯ ವೇಳೆ ಅಗಾಗ್ಗೆ ಕಾಡಾನೆಗಳ ಹಿಂಡು ಕಾಣಿಸಿಕೊಳ್ಳುತ್ತಿವೆ. ಕಳೆದ ಹಲವಾರು ವರ್ಷಗಳಿಂದ ಕೇರಳ ಮತ್ತು ಕರ್ನಾಟಕದ ಗಡಿ ಗ್ರಾಮಗಳು ಕಾಡಾನೆಗಳ ದಾಳಿಯಿಂದ ನಲುಗಿ ಹೋಗಿವೆ. ಕರ್ನಾಟಕದಿಂದ ಓಡಿಸುವಾಗ ಕೇರಳಕ್ಕೆ, ಅಲ್ಲಿಂದ ಓಡಿಸುವಾಗ ಈ ಭಾಗಕ್ಕೆ ಆನೆಗಳ ಸಂಚಾರ ಮತ್ತು ಕೃಷಿಗಳಿಗೆ ಸಂಚಕಾರ ನಿರಂತರವಾಗಿದೆ. ಸುಳ್ಯ ತಾಲೂಕಿನ ಮಂಡೆಕೋಲು, ಆಲೆಟ್ಟಿ,ಕೋಲ್ಚಾರ್, ಅಜ್ಜಾವರ ಸೇರಿ ಗಡಿ ಗ್ರಾಮಗಳು ಕಾಡಾನೆ ಹಾವಳಿಯಿಂದ ನಲುಗಿ ಹೋಗಿವೆ. ಕಾಡಾನೆಗಳ ಹಾವಳಿಯನ್ನು ತಡೆಯಲು ಶಾಶ್ವತ ಪರಿಹಾರ ಹುಡುಕಲು ಎರಡೂ ರಾಜ್ಯಗಳ ಸರಕಾರದಿಂದ ಸಾಧ್ಯವಾಗಿಲ್ಲ.
Kshetra Samachara
29/08/2022 10:33 am