ಮಂಗಳೂರು: ಮುಂಗಾರು ಪ್ರವೇಶದ ಬಳಿಕ ನಿನ್ನೆಯಿಂದ ನಿರಂತರವಾಗಿ ಧಾರಾಕಾರವಾಗಿ ಮಳೆ ಸುರಿಯಲಾರಂಭಿಸಿದೆ. ಇನ್ನೂ ಮಳೆಯ ಅಬ್ಬರ ಕಡಿಮೆಯಾಗಿಲ್ಲ. ಇಂದು ದ.ಕ.ಜಿಲ್ಲೆಯ ಬಂಟ್ವಾಳ ತಾಲೂಕಿನ ವೀರಕಂಭ ಗ್ರಾಮದಲ್ಲಿ ದಾಖಲೆಯ 135 ಮಿ.ಮೀ. ಮಳೆಯಾಗಿದೆ ಎಂದು ರಾಜ್ಯ ನೈಸರ್ಗಿಕ ವಿಕೋಪ ನಿಗಾ ಕೇಂದ್ರ ತಿಳಿಸಿದೆ.
ಕಳೆದ 24 ಗಂಟೆಯಲ್ಲಿ ಮಂಗಳೂರಿನಲ್ಲಿ ದಾಖಲೆಯ ಮಳೆ ಸುರಿದಿದೆ. ಮಂಗಳೂರಿನಲ್ಲಿ 74.5 ಎಂಎಂ ಮಳೆ ಸುರಿದರೆ, ಬಂಟ್ವಾಳದಲ್ಲಿ 58.7ಎಂಎಂ, ಬೆಳ್ತಂಗಡಿಯಲ್ಲಿ 27.5ಎಂಎಂ, ಪುತ್ತೂರಿನಲ್ಲಿ 35.2ಎಂಎಂ, ಸುಳ್ಯದಲ್ಲಿ 43.3ಎಂಎಂ, ಮೂಡುಬಿದಿರೆಯಲ್ಲಿ 56.5 ಎಂಎಂ, ಕಡಬದಲ್ಲಿ 24.6ಎಂಎಂ ಮಳೆ ಸುರಿದಿದೆ.
ಇಂದು ಸುರಿದ ಧಾರಾಕಾರ ಮಳೆಗೆ ಹಲವೆಡೆ ರಸ್ತೆಯು ನೀರಿನಿಂದ ತುಂಬಿ ವಾಹನ ಸವಾರರು, ಪಾದಚಾರಿಗಳು ಪಾಡು ಪಟ್ಟಿದ್ದಾರೆ. ಅಲ್ಲದೆ ಹೆಚ್ಚಿನ ಕಡೆಗಳಲ್ಲಿ ಮನೆಗಳು, ಅಂಗಡಿಗಳು ಜಲಾವೃತಗೊಂಡು ಅವಾಂತರ ಸೃಷ್ಟಿಯಾಗಿದೆ. ಜಿಲ್ಲೆಯಲ್ಲಿ ನಾಳೆ ಬೆಳಗ್ಗೆ 8.30ವರೆಗೆ ಆರೆಂಜ್ ಅಲರ್ಟ್ ಘೋಷಣೆಯಾಗಿದೆ.
Kshetra Samachara
30/06/2022 10:56 pm