ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮುಲ್ಕಿ: ಅವಾಂತರ ಸೃಷ್ಟಿಸಿದ ಮೊದಲ ಮಳೆ!

ಮುಲ್ಕಿ: ಮುಲ್ಕಿ ತಾಲೂಕು ವ್ಯಾಪ್ತಿಯಲ್ಲಿ ಬುಧವಾರ ಮಧ್ಯಾಹ್ನದ ಬಳಿಕ ಭಾರಿ ಮಳೆಯಾಗಿದ್ದು ಅವಾಂತರ ಸೃಷ್ಟಿಸಿದೆ. ತಾಲ್ಲೂಕು ವ್ಯಾಪ್ತಿಯಲ್ಲಿ ಬೆಳಗಿನ ಮೋಡ ಕವಿದ ವಾತಾವರಣವಿದ್ದು, ಕೆಲವೆಡೆ ಹನಿ ಹನಿ ಮಳೆ, ಮಧ್ಯಾಹ್ನದ ಬಳಿಕ ಭಾರಿ ಮಳೆ ಸುರಿದಿದೆ.

ಭಾರಿ ಮಳೆಯಿಂದ ರಾಷ್ಟ್ರೀಯ ಹೆದ್ದಾರಿ ಮುಲ್ಕಿ ಬಸ್ ನಿಲ್ದಾಣದ ಬಳಿಯಲ್ಲಿ ಚರಂಡಿ ವ್ಯವಸ್ಥೆ ಇಲ್ಲದೆ ಮಳೆ ನೀರು ಹರಿದು ಬಂದಿದ್ದು ವಾಹನ ಸಂಚಾರಕ್ಕೆ ತೀವ್ರ ತೊಂದರೆಯಾಯಿತು. ಮೊದಲ ಮಳೆಗೆ ಕಿನ್ನಿಗೋಳಿ ರಾಜ್ಯ ಹೆದ್ದಾರಿಯ ಕಾರ್ನಾಡು ಗಾಂಧಿ ಮೈದಾನದ ಬಳಿ ಕಳಪೆ ಕಾಂಕ್ರೀಟಿಕರಣದಿಂದ ಭಾರಿ ಗಾತ್ರದ ಹೊಂಡ ಉಂಟಾಗಿದ್ದು, ಮಳೆಗೆ ಬಾಯ್ತೆರೆದು ಅಪಾಯವನ್ನೆದುರಿಸುತ್ತಿದೆ. ಸದಾ ವಾಹನ ದಟ್ಟಣೆಯ ಪ್ರದೇಶವಾದ ಮುಲ್ಕಿ ವಿಜಯ ಸನ್ನಿಧಿ ಜಂಕ್ಷನ್ ಬಳಿ ಮೊದಲ ಮಳೆಗೆ ಭಾರಿ ಗಾತ್ರದ ಹೊಂಡ ಪ್ರತ್ಯಕ್ಷವಾಗಿದ್ದು, ವಾಹನ ಸವಾರರಿಗೆ ಸಂಕಷ್ಟ ಎದುರಾಗಿದೆ.

ಮೊದಲ ಮಳೆಗೆ ಕಾರ್ನಾಡ್ ಹಳೆ ಕಾಲದ ಮೀನುಮಾರುಕಟ್ಟೆ ಸೋರುತ್ತಿದ್ದು, ಮೀನು ಮಾರಾಟಕ್ಕೆ ಮಹಿಳೆಯರು ಪರದಾಡಬೇಕಾಯಿತು. ಮೀನು ಮಾರುಕಟ್ಟೆಯ ಬಳಿಯ ರಾಜ್ಯ ಹೆದ್ದಾರಿಯಲ್ಲಿ ಚರಂಡಿ ವ್ಯವಸ್ಥೆ ಇಲ್ಲದೆ ರಸ್ತೆಯಲ್ಲಿ ಕೆಸರು ನೀರು ನಿಂತಿದ್ದು ಅವ್ಯವಸ್ಥೆ ಆಗರವಾಗಿ ಪರಿಣಮಿಸಿದೆ.ಒಟ್ಟಾರೆಯಾಗಿ ಬುಧವಾರ ಮುಲ್ಕಿ, ಕಿನ್ನಿಗೋಳಿ, ಹಳೆಯಂಗಡಿ, ಪಡು ಪಣಂಬೂರು, ಅತಿಕಾರಿಬೆಟ್ಟು ಪರಿಸರದಲ್ಲಿ ಮಧ್ಯಾಹ್ನದ ಬಳಿಕ ಭಾರಿ ಮಳೆಯಾಗಿದ್ದು ಸಭೆ ಸಮಾರಂಭಗಳಿಗೆ ತೀವ್ರ ತೊಂದರೆಯಾಯಿತು.

Edited By : Manjunath H D
Kshetra Samachara

Kshetra Samachara

11/05/2022 08:08 pm

Cinque Terre

7.55 K

Cinque Terre

0