ವರದಿ: ರಹೀಂ ಉಜಿರೆ
ಉಡುಪಿ: ಅಪರೂಪದ ಮತ್ತು ಅಳಿವಿನಂಚಿನಲ್ಲಿರುವ ಶ್ರೀತಾಳೆ ಮರ ಮತ್ತೆ ಸುದ್ದಿಯಲ್ಲಿದೆ. ಕಾರಣ, ಈ ಮರ ಮೌಢ್ಯಕ್ಕೆ ಬಲಿಯಾಗುವ ಹಂತ ತಲುಪಿದೆ! ತಾಳೆ ಮರದಲ್ಲಿ ಹೂ ಬಿಟ್ಟರೆ ಊರಿಗೆ ಅನಿಷ್ಠ ಎಂಬ ಮೂಢನಂಬಿಕೆ ಗ್ರಾಮೀಣ ಭಾಗದಲ್ಲಿ ಇದೆ. ಹೂ ಬಿಟ್ಟ ತಾಳೆ ಮರ ಕಡಿಯಲು ಗ್ರಾಮಸ್ಥರು ಮುಂದಾಗಿದ್ದು, ಪರಿಸರ ಪ್ರಿಯರು ಭಾರಿ ವಿರೋಧ ವ್ಯಕ್ತಪಡಿಸಿದ್ದಾರೆ.
80 ವರ್ಷ ಹಳೆಯ ಶ್ರೀತಾಳೆ ಅಥವಾ ಪಣೋಲಿ ಮರ, ವೇಣೂರು ಬಳಿ ಕರಿಮಣೇಲು ಗ್ರಾಮದ ವ್ಯಕ್ತಿಯೋರ್ವರ ಜಮೀನಿನಲ್ಲಿದ್ದು, ಈ ಮರ ಸದ್ಯ ಹೂ ಬಿಟ್ಟಿದೆ. ಹೀಗೆ ಹೂ ಬಿಟ್ಟ ಮರ ಮುಂದಿನ 2 ವರ್ಷದಲ್ಲಿ ಅವಸಾನ ಹೊಂದುವುದು. ಆದರೆ, ತಾಳೆ ಮರ ಹೂ ಬಿಟ್ಟರೆ ಊರಿಗೆ ಅನಿಷ್ಠ ಎಂಬ ನಂಬಿಕೆ ಸ್ಥಳೀಯರದ್ದು. ಈಗ ಗ್ರಾಮಸ್ಥರು ಸೇರಿ ಮರ ಕಡಿಯಲು ಮುಂದಾಗಿದ್ದಾರೆ!
ನಾಳೆ ವಿವಿಧ ಪೂಜಾವಿಧಿ ಮೂಲಕ ಮರ ಕಡಿಯುವ ಕಾರ್ಯಕ್ರಮವನ್ನು ಗ್ರಾಮಸ್ಥರು ಹಮ್ಮಿಕೊಂಡಿದ್ದು, ಪರಿಸರ ಪ್ರಿಯರಿಂದ ವಿರೋಧ ವ್ಯಕ್ತವಾಗಿದೆ. ಪ್ರಪಂಚದಲ್ಲೇ ಅತ್ಯಪರೂಪದ ಈ ಮರವನ್ನು ಮೌಢ್ಯದ ಕಾರಣದಿಂದ ಕಡಿಯುತ್ತಿರುವುದು ಪ್ರಾಚ್ಯ ಸಂಶೋಧಕರಿಗೆ ಬೇಸರ ತರಿಸಿದೆ.
ಈ ಮರ 66 ವರ್ಷಗಳಿಗೊಮ್ಮೆ ಹೂ ಬಿಟ್ಟು ಎರಡು ಲಕ್ಷಕ್ಕೂ ಹೆಚ್ಚು ಬೀಜ ಬಿಡುತ್ತದೆ. ಈ ಮರದ ಒಡಲಲ್ಲಿ ಸುಮಾರು 200-250 ಕೆ.ಜಿ.ಯಷ್ಟು ಸಬ್ಬಕ್ಕಿಯಂತಹ ಹಿಟ್ಟು/ತಿರುಳು ದೊರಕುತ್ತದೆ. ಇಂತಹ ಮರ ಕಾಡು, ನಾಡಿನಲ್ಲಿದ್ದರೆ 100 ಕುಟುಂಬಗಳು 3 ತಿಂಗಳ ಕಾಲ ಆಹಾರ ಪಡೆಯಬಹುದು! ಇದರಲ್ಲಿ ಸಂಗ್ರಹಿಸಿದ 38000 ಬೀಜಗಳನ್ನು ಕಾವೇರಿಯಿಂದ ವಾರಣಾಸಿವರೆಗೆ ಈಗಾಗಲೇ ಪ್ರಸರಣ ಮಾಡಲಾಗಿದೆ. ಭಾರತೀಯ ಇತಿಹಾಸ, ಪುರಾಣ, ಕಾವ್ಯಗಳನ್ನು ಅಕ್ಷರ ರೂಪದಲ್ಲಿ ಬರೆದಿರುವುದು ಈ ಮರದ ಎಲೆಗಳಿಂದಲೇ. ಇದಲ್ಲದೆ ಹಲವು ಔಷಧೀಯ ಗುಣಗಳಿರುವ ಈ ಮರ ಮೌಢ್ಯಕ್ಕೆ ಬಲಿಯಾಗಬಾರದು ಎಂಬುದು ಪರಿಸರ ಪ್ರೇಮಿಗಳ ವಾದ.ಅಂದಹಾಗೆ, ಮರ ಕಡಿಯದಂತೆ ಪರಿಸರ ಪ್ರೇಮಿಗಳ ತಂಡ, ಊರವರ ಸಹಿತ ಸ್ವಾಮೀಜಿಯೊಬ್ಬರಿಗೂ ಮನವಿ ಸಲ್ಲಿಸಿದೆ.
Kshetra Samachara
20/11/2021 05:57 pm