ಮಂಗಳೂರು: ದೇಸಿ ನಾಯಿ, ಬೆಕ್ಕಿನ ಮರಿಗಳನ್ನು ಉಚಿತವಾಗಿ ದತ್ತು ನೀಡುವ ವಿಶೇಷ ಕಾರ್ಯಕ್ರಮ ಇಂದು ಮಂಗಳೂರಿನ ಶ್ರೀ ಮಂಗಳಾದೇವಿ ದೇವಾಲಯ ರಸ್ತೆಯಲ್ಲಿ ನಡೆಯಿತು. ಈ ಮೂಲಕ ಬೀದಿಬದಿ ಅನಾಥವಾಗಿದ್ದ ಸಾಕುಪ್ರಾಣಿ ಮರಿಗಳಿಗೆ ಮಾನವ ಪ್ರೀತಿಯಾಶ್ರಯ ಒದಗಿಸುವ ಸೇವಾ ಕೈಂಕರ್ಯ ಜರುಗಿತು.
ಶಕ್ತಿನಗರದ ಎನಿಮಲ್ ಕೇರ್ ಟ್ರಸ್ಟ್ ನವರು ಬೀದಿಬದಿ ಅನಾಥವಾಗಿದ್ದ ನಾಯಿ, ಬೆಕ್ಕಿನ ಮರಿಗಳನ್ನು ತಂದು ಶುಶ್ರೂಷೆ ಮಾಡುತ್ತಾರೆ. ಅಲ್ಲದೆ, ಸೋಂಕು ಹರಡದಂತೆ ಲಸಿಕೆ ನೀಡಿ ಪೋಷಣೆ ಮಾಡಿ ಅಗತ್ಯವಿರುವ ಪ್ರಾಣಿ ಪ್ರಿಯರಿಗೆ ಉಚಿತವಾಗಿ ಮರಿಗಳನ್ನು ದತ್ತು ನೀಡಲಾಗುತ್ತದೆ.
ಇಂದು 10 ಬೆಕ್ಕಿನ ಮರಿಗಳು ಹಾಗೂ 20 ನಾಯಿಮರಿಗಳ ದತ್ತು ಪ್ರಕ್ರಿಯೆ ನಡೆಯುತ್ತಿದ್ದು, ಈಗಾಗಲೇ ಸಾಕಷ್ಟು ಮರಿಗಳನ್ನು ದತ್ತು ನೀಡಲಾಗಿದೆ. ದತ್ತು ಪಡೆಯುವವರು ಕಡ್ಡಾಯವಾಗಿ ಸಂತಾನ ಹರಣ ಚಿಕಿತ್ಸೆ ಮಾಡಿಸಬೇಕು. ತಿಂಗಳಿಗೊಮ್ಮೆ ಪ್ರಾಣಿಗಳ ಬಗ್ಗೆ ಎನಿಮಲ್ ಕೇರ್ ಟ್ರಸ್ಟ್ ಗೆ ವರದಿ ಕೊಡುತ್ತಿರಬೇಕು. ಈ ಮೂಲಕ ದತ್ತು ಕೊಟ್ಟ ಬಳಿಕವೂ ಪ್ರಾಣಿಗಳ ಬಗ್ಗೆ ಕಾಳಜಿ ವಹಿಸುತ್ತದೆ ಎನಿಮಲ್ ಕೇರ್ ಟ್ರಸ್ಟ್.
Kshetra Samachara
21/11/2021 05:43 pm