ಕಾರ್ಕಳ : ಪಶ್ಚಿಮ ಘಟ್ಟದ ತಪ್ಪಲಿನಲ್ಲಿ ಕಾಣಸಿಗುತ್ತಿದ್ದ ಪಾರಂಪರಿಕ ಮರದ ಸೇತುವೆಗಳು ಮರೆಯಾಗಿ, ಕಾಂಕ್ರೀಟ್ ಸೇತುವೆಗಳು ತುಂಬಿಕೊಂಡಿವೆ. ಹೀಗಾಗಿ ಆಕರ್ಷಕ ಪಾರಂಪರಿಕ ಮರದ ಸೇತುವೆ ಉಳಿಸುವ ಪ್ರಯತ್ನ ಕರಾವಳಿಯ ಹಳ್ಳಿಯೊಂದರಲ್ಲಿ ಆರಂಭವಾಗಿದೆ. ಏನಿದು ಮರದ ಸೇತುವೆ? ಬನ್ನಿ ಇದನ್ನೊಮ್ಮೆ ನೋಡಿಕೊಂಡು ಬರೋಣ..
ಮೇಘಾಲಯ, ಮಣಿಪುರ ಮೀಜೋರಾಂನಲ್ಲಿ ಕಂಡು ಬರುವ ಆಕರ್ಷಕ ಮರದ ಸೇತುವೆಗಳಷ್ಟೇ ಕರಾವಳಿಯ ಹಳ್ಳಿಗಳಲ್ಲೂ ಆಕರ್ಷಕ ಸೇತುವೆಗಳು ಒಂದು ಕಾಲದಲ್ಲಿ ಇತ್ತು.ಆಕರ್ಷಕ ಸೇತುವೆಗಳನ್ನು ನಿರ್ಮಿಸುವ ಕೌಶಲ್ಯವೂ ನಮ್ಮವರಲ್ಲಿತ್ತು. ಆದರೀಗ ಎಲ್ಲವೂ ಮಾಯವಾಗಿ ಕಾಂಕ್ರೀಟ್ ಸೇತುವೆಗಳೇ ತುಂಬಿವೆ. ಹೀಗಾಗಿ ಪಾರಂಪರಿಕ ನೈಸರ್ಗಿಕ ಸೇತುವೆಗಳನ್ನು ನಿರ್ಮಿಸಿ, ಅವುಗಳ ಅಂದ ಚಂದ ಹೀಗಿತ್ತು ಅಂತ ತಿಳಿಸುವ ಸಣ್ಣ ಪ್ರಯತ್ನ ಶುರುವಾಗಿದೆ.ಉಡುಪಿ ಜಿಲ್ಲೆಯ ಕಾರ್ಕಳ ಭಾಗದಲ್ಲಿ ಸೇತುವೆ ನಿರ್ಮಾಣ ಕಾರ್ಯ ನಡೆಯುತ್ತಿದೆ. ಕಾರ್ಕಳದ ಮಾಳ ಎನ್ನುವ ಪ್ರದೇಶದಲ್ಲಿ ಪರಿಸರ ಪ್ರೇಮಿ ಪರುಷೋತ್ತಮ ಅಡ್ವೆಯವರು, ಮರದ ಸೇತುವೆ ನಿರ್ಮಾಣದಲ್ಲಿ ಪರಿಣತರನ್ನು ತೊಡಗಿಸಿಕೊಂಡು ಆಕರ್ಷಕ ಮರದ ಸೇತುವೆ ರಚಿಸುತ್ತಿದ್ದಾರೆ. ಕಾಡಿನಲ್ಲಿ ಸಿಗುವ ಬಳ್ಳಿ, ಮರ ಹಾಗೂ ಅಡಿಕೆ ಮರವನ್ನು ಬಳಸಿ ಅಂದವಾದ ಸೇತುವೆ ನಿರ್ಮಾಣ ಮಾಡುತ್ತಿದ್ದಾರೆ. ಹರಿವ ಜಲ ರಾಶಿಗಳ ನಡುವೆ ಪಾರಂಪರಿಕ ನೈಸರ್ಗಿಕ ಸೇತುವೆ ನೋಡುವುದೇ ಒಂದೊಳ್ಳೆ ಅನುಭವ.
ನೋಡುವುದಕ್ಕೆ ಆಕರ್ಷಕವಾಗಿರುವ ಈ ಸೇತುವೆ ನಡೆಯುವಾಗಲೂ ಖುಷಿ ಕೊಡುತ್ತದೆ. ಹೀಗಾಗಿ ಮಾಳ ಭಾಗದಲ್ಲಿ ನಿರ್ಮಾಣವಾದ ಹಲವು ಸೇತುವೆಗಳನ್ನು ನೋಡುವುದಕ್ಕೆ ಪ್ರವಾಸಿಗರು ಆಗಮಿಸುತ್ತಿದ್ದಾರೆ.. ಸೇತುವೆ ಕಣ್ತುಂಬಿಕೊಂಡು, ಗಿರಿ ಶಿಖರಗಳಲ್ಲಿ ಅಲೆದಾಡುತ್ತಾ ನೀರಿನಲ್ಲಿ ಆಟವಾಡುತ್ತಾ ಎಂಜಾಯ್ ಮಾಡುತ್ತಿದ್ದಾರೆ.
ಪಶ್ಚಿಮ ಘಟ್ಟದ ತಪ್ಪಲಿನ ನೈಸರ್ಗಿಕ ಸೊಬಗನ್ನು ಉಳಿಸಿ, ಗ್ರಾಮೀಣ ಬದುಕು ಹಾಗೂ ಕೌಶಲ್ಯವನ್ನು ಬೆಳೆಸುವ ನಿಸರ್ಗ ಪ್ರಿಯರ ಈ ಕೆಲಸ ಶ್ಲಾಘನೀಯ.
Kshetra Samachara
21/08/2021 02:12 pm