ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು: ಅಡ್ಯಾರ್ ನಲ್ಲಿ ಆಳುಪ ದೊರೆ 3ನೇ ‌ವೀರ ಕುಲಶೇಖರನ ಶಾಸನ ಪತ್ತೆ

ಮಂಗಳೂರು: ನಗರದ ಹೊರವಲಯದಲ್ಲಿರುವ ಅಡ್ಯಾರ್ ಗ್ರಾಮದ ಸೋಮನಾಥ ಕಟ್ಟೆ ಎಂಬಲ್ಲಿ ಆಳುಪ ದೊರೆ ಮೂರನೇ ಕುಲಶೇಖರನ ಶಾಸನವನ್ನು ಸ್ಥಳೀಯ ಯುವಕರು ಪತ್ತೆ ಮಾಡಿದ್ದಾರೆ.

ಶಾಸನವು ಮಣ್ಣಿನಲ್ಲಿ ಹುದುಗಿ ಹೋಗಿದ್ದು, ಸ್ಥಳೀಯರ ಸಹಕಾರದಿಂದ ಮೇಲೆತ್ತಿ ಸರಿಯಾಗಿ ನಿಲ್ಲಿಸಲಾಗಿದೆ.

19 ಸಾಲುಗಳುಳ್ಳ ಈ ಶಾಸನವನ್ನು ಕಣ ಶಿಲೆ (ಗ್ರಾನೈಟ್) ಯಲ್ಲಿ ಕೊರೆಯಲಾಗಿದೆ. ಶಾಸನವು 4 ಅಡಿ‌ ಎತ್ತರ ಹಾಗೂ 2 ಅಡಿ‌ ಅಗಲವಿದ್ದು, ಕನ್ನಡ ಲಿಪಿಯಲ್ಲಿದೆ.

ಈ ಶಾಸನದಲ್ಲಿ ಮೂರನೇ ಕುಲಶೇಖರನನ್ನು ಶ್ರೀ ಮತ್ಪ್ಯಾಂಡ್ಯ ಚಕ್ರವರ್ತಿರಾಯ ಗಜಾಂಕುಶ ವೀರ ಕುಲಶೇಖರ ಎಂದು ಬಣ್ಣಿಸಲಾಗಿದೆ.

ಸಾಧಾರಣ ಸಂವತ್ಸರದ ಧನು ಮಾಸ 2ನೇ ಆದಿತ್ಯವಾರ ಎಂಬ ಕಾಲಮಾನವನ್ನು ಶಾಸನದಲ್ಲಿ ಉಲ್ಲೇಖಿಸಲಾಗಿದೆ.

ವೀರ ಕುಲಶೇಖರ ಮಂಗಳೂರು ರಾಜ್ಯ (ಪ್ರದೇಶ) ವನ್ನು ಪರಿಪಾಲಿಸುತ್ತಿದ್ದ ಸಂದರ್ಭ ಅಡಿಯಾರ(ಅಡ್ಯಾರ್) ಪರಿಸರದ ಬೆದೆಕಾರು (ಮಳೆಗಾಲದಲ್ಲಿ ಬೆಳೆಯುವ ತರಿ ಭೂಮಿ) ಭೂಮಿಯನ್ನು ದಾನ ಕೊಟ್ಟಿರುವ ಉಲ್ಲೇಖ ಮಾಡಲಾಗಿದೆ. ಅಲ್ಲದೆ, ಶಾಸನ ಬರಹದ ಕೊನೆಯಲ್ಲಿ ಈ ಶಾಸನವನ್ನು ಯಾರು ಹಾಳು ಮಾಡುವರೋ ಅವರು ಗಂಗೆ ಮತ್ತು ವಾರಣಾಸಿಯಲ್ಲಿ ಸಹಸ್ರ ಗೋವುಗಳನ್ನು ಕೊಂದ ದೋಷಕ್ಕೆ ಹೋಗುವರು ಎಂಬ ಶಾಪಾಶಯ ವಾಕ್ಯ ಬರೆಯಲಾಗಿದೆ. ಈ ದಾನವನ್ನು ಗುರುವ[ಗುರುವಣಪ್ಪ] ಒಡೆಯನು ಮಾಡಿದ ಎಂಬುದನ್ನು ಶಾಸನದಲ್ಲಿ ತಿಳಿಸಲಾಗಿದೆ.

ಈ ಶಾಸನವನ್ನು ಸಂಶೋಧನಾರ್ಥಿ ಶ್ರುತೇಶ್ ಆಚಾರ್ಯ ಮೂಡುಬೆಳ್ಳೆ ಅವರು ಓದಿ ಅರ್ಥೈಸುವಲ್ಲಿ ಸಹಕಾರ ನೀಡಿದ್ದು, ಇವರಿಗೆ ಕ್ಷೇತ್ರಕಾರ್ಯ ಶೋಧನೆಯಲ್ಲಿ ಸಾಮಾಜಿಕ ಕಾರ್ಯಕರ್ತ ಗಣೇಶ್ ರಾಜ್ ಸರಳಬೆಟ್ಟು‌ ಸಹಾಯ ಮಾಡಿದ್ದಾರೆ‌. ಮುಖ್ಯವಾಗಿ ಶಾಸನದಲ್ಲಿ ಉಲ್ಲೇಖಗೊಂಡ‌ ಅಡಿಯಾರ ಎಂಬ ಹೆಸರಿನ‌ ಊರು ಪ್ರಸ್ತುತ ಚಾಲ್ತಿಯಲ್ಲಿರುವ ಅಡ್ಯಾರ್ ಇದರ ಪೂರ್ವದ ಹೆಸರಾಗಿರಬಹುದು ಎಂದು ಶ್ರುತೇಶ್‌ ಆಚಾರ್ಯ ‌ಮೂಡುಬೆಳ್ಳೆ ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಕ್ಷೇತ್ರಕಾರ್ಯ ಶೋಧನೆಯ ಸಂದರ್ಭ ಸ್ಥಳೀಯ ಯುವಕರಾದ ವಿಶ್ವಾಸ್, ವಿನೀತ್, ರಿಖಿಲ್, ಪ್ರಸನ್ನ, ರತನ್, ಸುಜಿತ್, ಸುರೇಶ್ ಶೆಟ್ಟಿ ಸಹಕಾರ ನೀಡಿದ್ದಾರೆ.

Edited By : Manjunath H D
Kshetra Samachara

Kshetra Samachara

03/02/2021 02:00 pm

Cinque Terre

32.6 K

Cinque Terre

1

ಸಂಬಂಧಿತ ಸುದ್ದಿ