ವಿಶೇಷ ವರದಿ: ರಹೀಂ ಉಜಿರೆ
ಉಡುಪಿ: ಮಲ್ಪೆ ಸೈಂಟ್ ಮೇರಿಸ್ ದ್ವೀಪ , ಕರಾವಳಿಯ ಪ್ರಸಿದ್ಧ ಪ್ರವಾಸಿ ತಾಣ. ಕರಾವಳಿಗೆ ಬರುವ ದೂರದೂರುಗಳ ಜನ ,ಮಲ್ಪೆ ಸಮೀಪದ ಈ ದ್ವೀಪ ನೋಡದೆ ಹೋಗಲಾರರು. ಯುವ ಜನರಂತೂ ಈ ಐಲ್ಯಾಂಡ್ ಹೆಸರು ಕೇಳಿದ್ರೇನೇ ರೋಮಾಂಚನಗೊಳ್ತಾರೆ.
ಆದರೆ ಇದೇ ದ್ವೀಪ ಹಲವು ಯುವಜನರನ್ನು ಬಲಿ ಪಡೆಯುತ್ತಿದೆ ಎಂಬುದನ್ನು ಹೇಳದೆ ವಿಧಿ ಇಲ್ಲ. ವಿದ್ಯಾರ್ಥಿಗಳು ಮತ್ತು ಯುವಜನರು ಇಲ್ಲಿಗೆ ಬಂದು ರೋಮಾಂಚನಗೊಂಡು ಜೀವ ಕಳೆದುಕೊಳ್ಳುತ್ತಿರುವ ಪ್ರವೃತ್ತಿ ಹೆಚ್ಚುತ್ತಿದೆ. ಈ ವರ್ಷ ಸೈಂಟ್ ಮೇರಿಸ್ ನಲ್ಲಿ ಹತ್ತಕ್ಕೂ ಹೆಚ್ಚು ಯುವಜನರು ಸಾವನ್ನಪ್ಪಿದ್ದಾರೆ. ಸೆಲ್ಫಿಗಾಗಿ ಕಲ್ಲುಬಂಡೆಯ ತುತ್ತ ತುದಿಗೆ ಹೋಗಿ ಜೀವಕಳೆದುಕೊಂಡವರಿದ್ದಾರೆ. ಅಲೆಯಲ್ಲಿ ಮೈಮರೆತು ಮುಳುಗಿ ಹೋದವರಿದ್ದಾರೆ. ಈಗ ಮಳೆಗಾಲ ಮುಗಿದಿದ್ದು, ಅಕ್ಟೋಬರ್ ನಲ್ಲಿ ಮತ್ತೊಂದು ಪ್ರವಾಸಿ ಋತು ತೆರೆದುಕೊಳ್ಳುತ್ತಿದೆ. ಈ ಹಿನ್ನೆಲೆಯಲ್ಲಿ ಸುರಕ್ಷತಾ ದೃಷ್ಡಿಯಿಂದ ಜಿಲ್ಲಾಡಳಿತ ಮತ್ತು ಮಲ್ಪೆ ಅಭಿವೃದ್ಧಿ ಸಮಿತಿ ಕೆಲವೊಂದು ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.
ಮೊನ್ನೆ ಈ ದ್ವೀಪದ ಪಕ್ಕದ ಬೀಚ್ ನಲ್ಲಿ ಮಣಿಪಾಲದ ಮೂವರು ವಿದ್ಯಾರ್ಥಿಗಳು ನೀರುಪಾಲಾಗಿದ್ದರು. ಇದೀಗ ಸೈಂಟ್ ಮೇರಿಸ್ ದ್ವೀಪದ ಅಪಾಯವನ್ನು ಕಡಿಮೆಗೊಳಿಸಲು ಜಿಲ್ಲಾಡಳಿತ ಮುಂದಾಗಿದೆ. ಬಹುತೇಕ ಜನರು ಸೆಲ್ಫಿ ಕ್ರೇಜಿಗೆ ಬಲಿಯಾಗುತ್ತಿರುವುದು ಮನಗಂಡ ಜಿಲ್ಲಾಡಳಿತ, ಸುರಕ್ಷಿತ ಸ್ಥಳದಲ್ಲಿ ಸೆಲ್ಫಿ ಪಾಯಿಂಟ್ ನಿರ್ಮಾಣ ಮಾಡಲು ಮುಂದಾಗಿದೆ. ತಂಡವಾಗಿ ಪ್ರವಾಸಕ್ಕೆ ಬರುವ ಕಾಲೇಜಿನ ಸಿಬ್ಬಂದಿಗಳನ್ನು, ಮೊದಲೇ ಗುರುತಿಸಿ ಅವರಿಗೆ ಮಕ್ಕಳ ಜವಾಬ್ದಾರಿಯನ್ನು ನಿಭಾಯಿಸಲು ಮಾರ್ಗದರ್ಶನ ನೀಡಲು ತೀರ್ಮಾನಿಸಲಾಗಿದೆ.
ಇನ್ನೇನು ಮುಂದಿನ ವಾರ ಸೈಂಟ್ ಮೇರಿಸ್ ಯಾನ ಮತ್ತು ಮಲ್ಪೆ ಬೀಚ್ ನ ಕ್ರೀಡಾ ಚಟುವಟಿಕೆ ಪ್ರಾರಂಭಗೊಳ್ಳುತ್ತೆ.ಕೇವಲ ಜಿಲ್ಲಾಡಳಿತವನ್ನಷ್ಟೆ ನಂಬದೆ ,ಇಲ್ಲಿಗೆ ಬರುವ ಪ್ರವಾಸಿಗರು ತಮ್ಮ ಸುರಕ್ಷತೆ ಬಗ್ಗೆ ಗಮನ ಹರಿಸಬೇಕೆಂಬುದು ಪಬ್ಲಿಕ್ ನೆಕ್ಸ್ಟ್ ಕಳಕಳಿಯಾಗಿದೆ.
PublicNext
02/10/2022 10:43 am