ವರದಿ: ವಿಶೇಷ ರಹೀಂ ಉಜಿರೆ
ಉಡುಪಿ: ಕರ್ನಾಟಕ ಕರಾವಳಿಯಲ್ಲಿ ಪ್ರವಾಸೋದ್ಯಮಕ್ಕೆ ಯಥೇಚ್ಛ ಅವಕಾಶಗಳಿವೆ. ಆದರೆ ರಾಜ್ಯ ಸರಕಾರ ಈತನಕ ಪೂರ್ಣಪ್ರಮಾಣದಲ್ಲಿ ಇಲ್ಲಿನ ಪ್ರಕೃತಿ ಸೌಂದರ್ಯ ಮತ್ತು ಸಮುದ್ರ, ನದಿಗಳನ್ನು ಇನ್ನೂ ಸರಿಯಾಗಿ ಬಳಸಿಕೊಂಡಿಲ್ಲ. ಇದೀಗ ಸಾಗರಮಾಲಾ ಯೋಜನೆಯಡಿ ಜಲಮಾರ್ಗ ಅಭಿವೃದ್ಧಿಪಡಿಸುವ ಯೋಜನೆಗೆ ತಾತ್ವಿಕ ಅನುಮೋದನೆ ಸಿಕ್ಕಿದೆ. ಇದು ಪೂರ್ಣಗೊಂಡರೆ ಉಡುಪಿ ರಾಜ್ಯದಲ್ಲೇ ಮುಂಚೂಣಿ ಪ್ರವಾಸೋದ್ಯಮ ಕೇಂದ್ರವಾಗಿ ಮಾರ್ಪಾಡಾಗಲಿದೆ.
ಕೇರಳ ಮತ್ತು ಗೋವಾದಲ್ಲಿ ಪ್ರವಾಸೋದ್ಯಮ ಕ್ಷೇತ್ರ ಸಾಕಷ್ಟು ಅಭಿವೃದ್ಧಿ ಹೊಂದಿದೆ. ಕರ್ನಾಟಕದಲ್ಲೂ ಅದೇ ಮಾದರಿಯಲ್ಲಿ ಪ್ರವಾಸೋದ್ಯಮವನ್ನು ಅಭಿವೃದ್ಧಿಪಡಿಸುವ ಯೋಜನೆ ಹಮ್ಮಿಕೊಳ್ಳಲಾಗಿದೆ. ಇದರ ಮೊದಲ ಹಂತವಾಗಿ ಉಡುಪಿ ಜಿಲ್ಲೆಯ ಹಂಗಾರಕಟ್ಟೆಯಿಂದ ಮಣಿಪಾಲದವರೆಗೂ ಕೇಂದ್ರ ಸರಕಾರದ ಸಾಗರಮಾಲಾ ಯೋಜನೆಯಡಿ ಜಲಮಾರ್ಗವನ್ನು ಅಭಿವೃದ್ಧಿಪಡಿಸುವ ಯೋಜನೆಗೆ ನೀಲನಕಾಶೆ ಸಿದ್ಧಗೊಳ್ಳುತ್ತಿದೆ.
ಹಂಗಾರಕಟ್ಟೆ ಅಳಿವೆ ಮಾರ್ಗವಾಗಿ ಬೆಂಗ್ರೆ, ಕೆಮ್ಮಣ್ಣು, ಕಲ್ಯಾಣಪುರದಿಂದ ಮಣಿಪಾಲದ ವರೆಗೂ ದೋಣಿಗಳು ಸರಾಗವಾಗಿ ಬರಲು ಬೇಕಾದ ವ್ಯವಸ್ಥೆಯನ್ನು ಈ ಯೋಜನೆಯಡಿ ಮಾಡಲಾಗುತ್ತದೆ. ಸದ್ಯ ಬೆಂಗ್ರೆ, ಕೆಮ್ಮಣ್ಣು ಸುತ್ತಲಿನ ಪ್ರದೇಶದಲ್ಲಿ ಒಂದೆರಡು ಬೋಟ್ ಹೌಸ್‌ಗಳು ಓಡಾಡುತ್ತಿವೆ. ಸಾಗರಮಾಲಾ ಯೋಜನೆಯಡಿ ಪ್ರವಾಸೋದ್ಯಮ ಬೋಟುಗಳ ಸಂಚಾರಕ್ಕೆ ಅನುಕೂಲವಾಗುವಂತೆ ಹೂಳೆತ್ತುವ ಕಾರ್ಯವನ್ನು ಮೊದಲ ಹಂತದಲ್ಲಿ ನಡೆಸಲಾಗುತ್ತದೆ.
ಹಂಗಾರಕಟ್ಟೆ-ಮಣಿಪಾಲ ಜಲಮಾರ್ಗವೂ ಬಹುತೇಕ ಸ್ವರ್ಣಾ ನದಿಯಲ್ಲೇ ಇರುವುದರಿಂದ ಹಂಗಾರಕಟ್ಟೆಯಿಂದ ಬೆಂಗ್ರೆ, ಕೆಮ್ಮಣ್ಣು ಮಾರ್ಗವಾಗಿ ಕಲ್ಯಾಣಪುರದ ವರೆಗೂ ಬೋಟುಗಳು ಸರಾಗವಾಗಿ ಬರಲಿವೆ. ಆದರೆ ಕಲ್ಯಾಣಪುರದಲ್ಲಿ ಈಗಾಗಲೇ ಒಂದು ಕಿಂಡಿ ಅಣೆಕಟ್ಟು ನಿರ್ಮಾಣ ಮಾಡಿರುವುದರಿಂದ ಅಲ್ಲಿಂದ ಮಣಿಪಾಲದ ಭಾಗಕ್ಕೆ ಬೋಟು ಸಂಚಾರ ಕಷ್ಟವಾಗಲಿದೆ. ಹೀಗಾಗಿ ಕಿಂಡಿ ಅಣೆಕಟ್ಟು ಪೂರ್ಣ ಪ್ರಮಾಣದಲ್ಲಿ ಯೋಜನೆ ಅನುಷ್ಠಾನಕ್ಕೆ ಅಡ್ಡಿಯಾಗುವ ಸಾಧ್ಯತೆಯಿದೆ. ಹಂಗಾರಕಟ್ಟೆಯಿಂದ ಕಲ್ಯಾಣಪುರ ಕಿಂಡಿ ಅಣೆಕಟ್ಟಿನ ವರೆಗೂ ಮೊದಲ ಹಂತದಲ್ಲಿ ಜಲಮಾರ್ಗದ ಅಭಿವೃದ್ಧಿ ಮಾಡುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ.
ಈ ಯೋಜನೆಯಡಿ ,ನಿರ್ದಿಷ್ಟ ಸ್ಥಳಗಳಲ್ಲಿ ಬೋಟು ಲಂಗರು ಹಾಕಲು ಬೇಕಾದ ವ್ಯವಸ್ಥೆಯನ್ನು ಮಾಡಲಾಗುತ್ತದೆ. ಜಲಮಾರ್ಗದ ಸಂಪೂರ್ಣ ಅಭಿವೃದ್ಧಿ ಅನಂತರ ಮೀನುಗಾರಿಕೆಯ ಬೋಟುಗಳು, ಭವಿಷ್ಯದಲ್ಲಿ ಸಣ್ಣ ಪ್ರಮಾಣದಲ್ಲಿ ವಾಣಿಜ್ಯ ಉದ್ದೇಶಿತ ಬೋಟುಗಳು ಓಡಲು ಅವಕಾಶ ಮಾಡಿಕೊಡುವ ಸಾಧ್ಯೆಯೂ ಇದೆ.
ಇತ್ತೀಚೆಗೆ ದಿಲ್ಲಿಗೆ ಭೇಟಿ ನೀಡಿದ್ದ ಸಿಎಂ ಬೊಮ್ಮಾಯಿ, ಹಂಗಾರಕಟ್ಟೆ-ಮಣಿಪಾಲ ಜಲಮಾರ್ಗದ ಅಭಿವೃದ್ಧಿಯ ಬಗ್ಗೆಯೂ ಮಾತುಕತೆ ನಡೆದಿದ್ದು, ಈ ಜಲಮಾರ್ಗ ಅಭಿವೃದ್ಧಿಗೆ ಒಪ್ಪಿಗೆ ಸೂಚಿಸಲಾಗಿದೆ. ಅಂದಾಜು 25 ಕೋಟಿ.ರೂ ಕಾಮಗಾರಿಗೆ ತಾತ್ವಿಕ ಅನುಮೋದನೆ ದೊರೆತಿದೆ.
PublicNext
08/08/2022 07:11 pm