ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು: ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿಗೆ 5000 ಕ್ಕೂ ಅಧಿಕ ಮರಗಳ ಮಾರಣಹೋಮ

ಪಬ್ಲಿಕ್ ನೆಕ್ಸ್ಟ್ ವಿಶೇಷ ವರದಿ: ವಿಶ್ವನಾಥ ಪಂಜಿಮೊಗರು

ಮಂಗಳೂರು: ಅಭಿವೃದ್ಧಿಯ ನೆಪದಲ್ಲಿ ಪರಿಸರದ ಮೇಲೆ ಮಾನವ ನಿತ್ಯವೂ ಪ್ರಹಾರ ಮಾಡುತ್ತಲೇ ಇರುತ್ತಾನೆ. ಇದೀಗ ಮಂಗಳೂರಿನಲ್ಲಿ ರಾಷ್ಟ್ರೀಯ ಹೆದ್ದಾರಿಯ ಚತುಷ್ಪಥ ಕಾಮಗಾರಿಗೆ ಮಂಗಳೂರಿನಿಂದ ಸಾಣೂರುವರೆಗಿನ 5,000ಕ್ಕೂ ಅಧಿಕ ಮರಗಳ ಮಾರಣಹೋಮ ನಡೆಸಲು ಸರಕಾರ ಸಿದ್ಧವಾಗಿದೆ. ಆದರೆ ಪರಿಸರ ಪ್ರೇಮಿಗಳು ಈ ಮರಗಳ ಉಳಿವಿಗಾಗಿ ಹೋರಾಟ ಮಾಡುತ್ತಿದ್ದಾರೆ.

ರಾಷ್ಟ್ರೀಯ ಹೆದ್ದಾರಿ 169ರ ಕುಲಶೇಖರ-ಸಾಣೂರು ನಡುವಿನ ಚತುಷ್ಪಥ ಕಾಮಗಾರಿಗೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಮುಂದಾಗಿದೆ. ಈ ಹಿನ್ನೆಲೆಯಲ್ಲಿ ಮಂಗಳೂರಿನ ಬಿಕರ್ನಕಟ್ಟೆಯಿಂದ ಸಾಣೂರುವರೆಗಿನ ಬರೋಬ್ಬರಿ 5000 ಕ್ಕೂ ಅಧಿಕ ಮರಗಳ ಮಾರಣಹೋಮಕ್ಕೆ ಗುರುತಿಸಲಾಗಿದೆ. ಬಿಕರ್ನಕಟ್ಟೆಯಿಂದ ಮಿಜಾರು ನಡುವಿನ ಪ್ರದೇಶ ಮಂಗಳೂರು ವಲಯ ಅರಣ್ಯಾಧಿಕಾರಿಗಳ ವ್ಯಾಪ್ತಿಯಲ್ಲಿದೆ. ಅಲ್ಲಿಂದ ಸಾಣೂರುವರೆಗಿನ ಪ್ರದೇಶ ಮೂಡುಬಿದಿರೆ ವಲಯದ ಅರಣ್ಯಾಧಿಕಾರಿಗಳ ವ್ಯಾಪ್ತಿಯಲ್ಲಿದೆ. ಈ ಭಾಗದ ಸರಕಾರಿ ಜಾಗದಲ್ಲಿರುವ ಮರಗಳನ್ನು ಈಗಾಗಲೇ ಗುರುತಿಸಲಾಗಿದೆ. ಖಾಸಗಿ ಸ್ಥಳದಲ್ಲಿನ ಮರಗಳನ್ನು ಇನ್ನಷ್ಟೇ ಗುರುತಿಸಬೇಕಾಗಿದೆ. ಅಧಿಕಾರಿಗಳು ಹೆದ್ದಾರಿ ನಿರ್ಮಾಣದ ಬಳಿಕ ಹಸಿರೀಕರಣಗೊಳಿಸುವ ಬಗ್ಗೆ ಭರವಸೆಯನ್ನು ನೀಡುತ್ತಾರೆ. ಅಭಿವೃದ್ಧಿಗೆ ತಮ್ಮದೇನು ತಕರಾರಿಲ್ಲ. ಆದರೆ ಅಭಿವೃದ್ಧಿಯ ನೆಪದಲ್ಲಿ ಮರಗಳನ್ನು ಕಡಿಯುವ ಬದಲು ಸ್ಥಳಾಂತರಿಸುವ ಮೂಲಕ ಅವುಗಳನ್ನು ಉಳಿಸಬಹುದು. ಇಲ್ಲದಿದ್ದಲ್ಲಿ ಹೊಸದಾಗಿ ಮರಗಳನ್ನು ಬೆಳೆಸಲು ಸ್ಥಳಾವಕಾಶ ಕೊಡಬೇಕೆಂಬುದು ಪರಿಸರ ಪ್ರೇಮಿಗಳ ಅಭಿಪ್ರಾಯ.

ಮರಗಳ ಬಲಿಯನ್ನು ಉಳಿಸಲು 60 ಮೀಟರ್ ಅಗಲಗೊಳಿಸಬೇಕಿದ್ದ ಮಂಗಳೂರು-ಕಾರ್ಕಳ ಹೆದ್ದಾರಿಯನ್ನು 45 ಮೀಟರ್ ಗೆ ಸೀಮಿತಗೊಳಿಸಲಾಗಿದೆ. ಇದೇ ಮಾದರಿಯನ್ನು ಕುಲಶೇಖರ-ಸಾಣೂರು ಚತುಷ್ಪಥ ಕಾಮಗಾರಿಯಲ್ಲೂ ಅನುಸರಿಸಬೇಕಾಗಿದೆ. ಮರಗಳನ್ನು ಉಳಿಸುವ ನಿಟ್ಟಿನಲ್ಲಿ ಮರು ಸರ್ವೇ ಮಾಡಬೇಕೆಂಬ ಪರಿಸರ ಪ್ರೇಮಿಗಳ ಬೇಡಿಕೆಗೆ ಅಧಿಕಾರಿಗಳು ಇನ್ನೂ ಸ್ಪಷ್ಟ ಉತ್ತರವನ್ನು ನೀಡಿಲ್ಲ. ಆದರೆ, ಅವರ ಬೇಡಿಕೆಯಂತೆ ಮರಗಳ ಸ್ಥಳಾಂತರ ಮಾಡುವುದೋ ಅಥವಾ ಇನ್ನಾವುದಾದರೂ ಕ್ರಮ ಕೈಗೊಳ್ಳಬಹುದೇ ಎಂಬ ಬಗ್ಗೆ ಚಿಂತನೆ ನಡೆಸುತ್ತೇವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಒಟ್ಟಿನಲ್ಲಿ, ಮರಗಳನ್ನು ಉಳಿಸಿ ಅಥವಾ ಪರ್ಯಾಯ ವ್ಯವಸ್ಥೆಗಳ ಮೂಲಕ ಅಭಿವೃದ್ಧಿ ಕಾಮಗಾರಿಗಳು ನಡೆಯಬೇಕಾದ ತುರ್ತು ಅನಿವಾರ್ಯತೆಯಲ್ಲಿ ನಾವಿದ್ದೇವೆ. ಈ ಬಗ್ಗೆ ಅಧಿಕಾರಿಗಳೂ ಚಿಂತನೆ ಮಾಡುವ ಅಗತ್ಯವಿದೆ.

Edited By : Manjunath H D
Kshetra Samachara

Kshetra Samachara

21/06/2022 06:34 pm

Cinque Terre

8.66 K

Cinque Terre

0

ಸಂಬಂಧಿತ ಸುದ್ದಿ