ಮುಲ್ಕಿ: ಹೋಬಳಿಯಲ್ಲಿ ಮಂಗಳವಾರ ಸಂಜೆ 8 ಗಂಟೆ ಸುಮಾರಿಗೆ ಸುರಿದ ಭಾರಿ ಮಳೆ ಗಾಳಿಗೆ ಅಪಾರ ಹಾನಿ ಸಂಭವಿಸಿದೆ. ಕಿನ್ನಿಗೋಳಿ ಸಮೀಪದ ಮೆನ್ನಬೆಟ್ಟು ಪಂಚಾಯತ್ ವ್ಯಾಪ್ತಿಯ ಕೊಡೆತ್ತೂರು ಗುತ್ತು ರಸ್ತೆಯಲ್ಲಿ ವಿದ್ಯುತ್ ಕಂಬ ಹಾಗೂ ಟ್ರಾನ್ಸ್ ಫಾರ್ಮರ್ ಮೇಲೆ ಭಾರೀ ಗಾತ್ರದ ಮರ ಬಿದ್ದು ಹಾನಿಯಾಗಿದೆ.
ಮರ ಬಿದ್ದ ಕೂಡಲೇ ಭೀಕರ ಶಬ್ದ ಉಂಟಾಗಿದ್ದು ಸ್ಥಳೀಯರು ಭಯಭೀತರಾಗಿದ್ದರು. ಕೂಡಲೇ ಸ್ಥಳಕ್ಕೆ ಧಾವಿಸಿದ ಸ್ಥಳೀಯರು ಮರವನ್ನು ತೆರವು ಗೊಳಿಸಿದ್ದಾರೆ. ಮರ ಬಿದ್ದ ರಭಸಕ್ಕೆ ವಿದ್ಯುತ್ ಕಂಬ ಹಾಗೂ ಟ್ರಾನ್ಸ್ ಫಾರ್ಮರ್ ಚಿಪ್ಪರ್ ಚೂರಾಗಿದ್ದು ವಿದ್ಯುತ್ ಅಸ್ತವ್ಯಸ್ತಗೊಂಡಿದೆ.ಬುಧವಾರ ಸಂಜೆ ತನಕ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ತಿಳಿದುಬಂದಿದೆ.
ಮಳೆಗಾಳಿಗೆ ಪಡುಪಣಂಬೂರು ಪಂಚಾಯತ್ ವ್ಯಾಪ್ತಿಯ ಹೊಯಿಗೆ ಗುಡ್ಡೆ ಬಳಿಯ ಕಲ್ಯಾಣಿ ಎಂಬವರ ಮನೆಗೆ ಮರ ಬಿದ್ದು ಹಾನಿ ಸಂಭವಿಸಿದೆ. 8:00 ವೇಳೆಗೆ ಮರ ಬಿದ್ದಿದ್ದು ಹಂಚು, ಪಕ್ಕಾಸು, ಮನೆಯ ಗೋಡೆಗೆ ಹಾನಿಯಾಗಿದೆ. ಮರ ಬೀಳುತ್ತಿದ್ದಂತೆ ಮನೆಯೊಳಗಿದ್ದ ಇಬ್ಬರೂ ಪವಾಡಸದೃಶ ಪಾರಾಗಿದ್ದಾರೆ.
ಪಡುಪಣಂಬೂರು ಗ್ರಾಮ ಪಂಚಾಯತ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದ್ದಾರೆ. ಮುಲ್ಕಿ ಹೋಬಳಿಯಲ್ಲಿ ವಿದ್ಯುತ್ ವ್ಯತ್ಯಯವಾಗಿದ್ದು ಸಿಡಿಲಿನಿಂದ ಹಾನಿ ಇನ್ನಷ್ಟೇ ತಿಳಿದು ಬರಬೇಕಾಗಿದೆ
Kshetra Samachara
09/12/2020 10:21 am