ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮೂಡಬಿದಿರೆ: ಅಡಿಕೆ ಬೆಳೆಗೆ ಮಾರಕ ಕೀಟ ಬಾಧೆ: ಸಂಕಷ್ಟದಲ್ಲಿ ಬೆಳೆಗಾರರು!

ಮೂಡಬಿದಿರೆ: ಮಳೆಗಾಲದಲ್ಲಿ ಸಾಮಾನ್ಯವಾಗಿ ಅಡಿಕೆ ಬೆಳೆಗೆ ಕೊಳೆರೋಗ ಕಾಣಿಸಿಕೊಳ್ಳುವುದು ಸಹಜ. ಇದರ ಜೊತೆಗೆ ಎಲೆ ಚುಕ್ಕೆ ರೋಗ, ಬೆಂಕಿ ರೋಗ ಮುಂತಾದ ಮಾರಕ ರೋಗಗಳ ಜೊತೆಗೆ ಹೊಸ ಪ್ರಭೇಧದ ಕೀಟವು ಅಡಿಕೆ ಬೆಳೆಗಾರರನ್ನು ತೀವ್ರ ಆತಂಕಕ್ಕೀಡುಮಾಡಿದೆ.

ದಕ್ಷಿಣ ಕನ್ನಡ ಜಿಲ್ಲೆಯ ಮುಲ್ಕಿ ಮೂಡಬಿದಿರೆ ಕ್ಷೇತ್ರದ ಕಲ್ಲಮುನ್ಕೂರು ಗ್ರಾಮದ ನಿಡ್ಡೋಡಿ ಭಾಗಗಳಲ್ಲಿ ಹೊಸ ರೂಪದ ಕೀಟ ರೋಗ ಕಾಣಿಸಿದೆ. ಇದಿರಿಂದ ಅಡಕೆ ಗೊನೆಯಿಂದ ಅಡಿಕೆಗಳು ಉದುರಿ ಗೊನೆ ಬರಿದಾಗುತ್ತಿದೆ.

ಮೇಲ್ನೋಟಕ್ಕೆ ನೀರುಕೊಳೆ ರೋಗದಂತೆಯೇ ಗೋಚರಿಸುವ ಮೂಲಕ ಅಡಕೆ ಕೆಂಪು ಮಿಶ್ರಿತ ಹಳದಿ ಬಣ್ಣಕ್ಕೆ ತಿರುಗಿ ಗೊನೆಯಿಂದ ತೊಟ್ಟು ಸಮೇತ ಉದುರಲು ಆರಂಭಿಸಿ, ಒಂದೆರಡು ದಿನದಲ್ಲೇ ಇಡೀ ಅಡಕೆ ಗೊನೆ ಖಾಲಿಯಾಗುತ್ತದೆ. ಉದುರಿದ ಅಡಕೆಯನ್ನು ಗಮನಿಸಿದಾಗ ಅಡಕೆ ತೊಟ್ಟಿನ ಬಳಿ ಮೃದುಭಾಗದಲ್ಲಿ ಸೂಜಿಯಿಂದ ಚುಚ್ಚಿದಂತೆ ಕಾಣುವ ಕಪ್ಪು ರಂಧ್ರ ಕಾಣುತ್ತದೆ. ಅಡಕೆ ಒಡೆದು ನೋಡಿದಾಗ ಒಳಗೆ ಕೀಟಗಳು ಕಾಣ ಸಿಗುತ್ತದೆ. ಇವು ಒಳಗಿನ ಮೃದು ಭಾಗಗಳನ್ನು ಬಹುತೇಕ ತಿಂದುಬಿಟ್ಟಿರುತ್ತದೆ. ಸಾಮಾನ್ಯವಾಗಿ ಚಿಗುರು ಅಡಕೆಗೆ ಈ ಕೀಟಗಳು ದಾಳಿ

ನಡೆಸುತ್ತವೆ. ಮೇಲ್ನೋಟಕ್ಕೆ ಕೊಳೆ ರೋಗದಂತೆ ಕಂಡರೂ ಇದು ಮಾರಕ ಕೀಟದ ಸಮಸ್ಯೆ.

ಈ ಕೀಟ ಬಾಧೆಯಿಂದಾಗಿ ಅಡಿಕೆಗೆ ತಗಲುವ ಸಾಮಾನ್ಯ ಕೊಳೆರೋಗಕ್ಕೆ ಬೋರ್ಡೋ ದ್ರಾವಣ ಸಿಂಪಡಣೆ ಸರ್ವೇಸಾಮಾನ್ಯ. ಆದರೆ ಬರುವ ಅನೇಕ ಮಲೆನಾಡು ಹಾಗೂ ಕರಾವಳಿಯಲ್ಲಿ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ಸಿಂಪರಣೆ ಸಾಧ್ಯವಾಗದೆ ಅಡಿಕೆ ಬೆಳೆಗಾರರು ಫಸಲು ನಷ್ಟದಿಂದ ಕಂಗಾಲಾಗಿದ್ದು, ಈಗ ಹೊಸದಾಗಿ ಕಂಡುಬಂದ ಅಡಕೆ ಕೀಟಬಾಧೆಯ ಪರಿಹಾರಕ್ಕೆ ಇಲಾಖೆ ತಜ್ಞರು ಔಷಧ ಸಿಂಪಡಣೆ ಮಾಡಲು ಸಲಹೆ ನೀಡಿದ್ದಾರೆ. ಫಿನಾಲೋಫಾಸ್ 25 ಇಸಿ ಔಷಧವನ್ನು ಒಂದು ಲೀಟರ್ ನೀರಿಗೆ ಎರಡು ಮಿಲಿಯಂತೆ ಮತ್ತು ಕ್ಲೋರೊಫೈರಿಫಾಸ್ 20 ಇಸಿ ಔಷಧವನ್ನು ಸಹ ಲೀಟರ್‌ಗೆ ಎರಡು ಮಿಲಿಯಂತೆ ಸೇರಿಸಿ ಸಿಂಪಡಣೆ ಮಾಡುವುದರಿಂದ ಕೀಟಬಾಧೆಯನ್ನು ಸಂಪೂರ್ಣ ಹತೋಟಿಗೆ ತರಬಹುದೆಂದು ತಿಳಿಸಿದ್ದಾರೆ. ಇದನ್ನು ಕೊಳೆರೋಗಕ್ಕೆ ಸಿಂಪಡಣೆ ಮಾಡುವ ದ್ರಾವಣದ ಜತೆ ಸೇರಿಸದೇ ಪ್ರತ್ಯೇಕವಾಗಿ ಸಿಂಪಡಣೆ ಮಾಡಬೇಕು ಎಂದು ಸಲಹೆ ನೀಡಿದ್ದಾರೆ.

ವಿಶೇಷ ವರದಿ- ರಂಜಿತಾ ಮೂಡಬಿದಿರೆ

Edited By : Somashekar
Kshetra Samachara

Kshetra Samachara

10/08/2022 12:38 pm

Cinque Terre

5.59 K

Cinque Terre

0

ಸಂಬಂಧಿತ ಸುದ್ದಿ