ಪಬ್ಲಿಕ್ ನೆಕ್ಸ್ಟ್ ವಿಶೇಷ ವರದಿ: ವಿಶ್ವನಾಥ ಪಂಜಿಮೊಗರು
ಮಂಗಳೂರು: ಕರಾವಳಿಯಲ್ಲಿ ಸಾಮಾನ್ಯವಾಗಿ ಹಲಸು ಯಥೇಚ್ಛವಾಗಿ ದೊರೆಯುತ್ತದೆ. ಆದರೆ ಎಪ್ರಿಲ್ - ಮೇ ತಿಂಗಳ ಬಳಿಕ ಮಾತ್ರ ಹಲಸಿನ ಹಣ್ಣು ಲಭ್ಯವಾಗುತ್ತದೆ. ಆದರೆ ಇಲ್ಲೊಂದು ಹೊಸ ತಳಿಯ ಹಲಸಿನ ಮರ ವರ್ಷಕ್ಕೆರಡು ಬಾರಿ ಫಸಲು ನೀಡುತ್ತದೆ.
ಮಂಗಳೂರಿನ ಅಶೋಕನಗರದ ಉತ್ಸಾಹಿ ಬಿ.ಸರ್ವೇಶ್ ರಾವ್ ಅವರು ಈ ವಿಶೇಷ ಹಲಸಿನ ತಳಿಯನ್ನು ಅಭಿವೃದ್ಧಿಪಡಿಸಿದ್ದಾರೆ. ಈ ವಿನೂತನ ಹಲಸು ತಳಿಯನ್ನು ಪ್ರಾಯೋಗಿಕವಾಗಿ ಸತತ ಮೂರು ವರ್ಷಗಳ ಕಾಲ ಪೋಷಣೆ ಮಾಡಿ ಇದೀಗ ಪರಿಚಯಿಸುತ್ತಿದ್ದಾರೆ. ಈ ಹೊಸ ತಳಿಗೆ ಅವರು 'ಮಂಗಳ ಅರ್ಲಿ' ಎಂದು ಹೆಸರಿಟ್ಟಿದ್ದಾರೆ. ಈ ತಳಿಯು ಮೂರು ವರ್ಷದಲ್ಲಿಯೇ ಫಸಲು ಕೊಡಲು ಆರಂಭಿಸುತ್ತದೆ. ಅದೇ ರೀತಿ ಡಿಸೆಂಬರ್ ಹಾಗೂ ಏಪ್ರಿಲ್ ಎರಡು ಬಾರಿ ಫಸಲು ನೀಡುತ್ತದೆ ಎಂದು ಹೇಳುತ್ತಾರೆ ಬಿ.ಸರ್ವೇಶ್ ರಾವ್
ಮಂಗಳ ಅರ್ಲಿ ಹಲಸು ಉತ್ತಮ ಗುಣಮಟ್ಟದ ಸ್ವಾದಿಷ್ಟ ಪರಿಮಳ ಹೊಂದಿದ್ದು, ರುಚಿಯೂ ಚೆನ್ನಾಗಿದೆ. ಸೊಳೆಯೂ ದಪ್ಪಗಿದ್ದು, ಪದಾರ್ಥಕ್ಕೂ, ಉಪ್ಪು ಸೊಳೆಗೂ, ಹಣ್ಣಾದ ಬಳಿಕ ತಿನ್ನಲೂ ಉತ್ತಮವಾಗಿದೆ. ಬೇರೆ ತಳಿಯ ಹಲಸಿನ ಬೀಜದಿಂದ ಗಿಡ ಮಾಡಲಾಗುತ್ತದೆ. ಎರಡು ತಿಂಗಳ ಬಳಿಕ ಆ ಗಿಡಕ್ಕೆ ಉತ್ತಮ ತಳಿಯ ಕಣ್ಣು ಕಸಿ ಮಾಡಿ ಈ ತಳಿಯನ್ನು ಅಭಿವೃದ್ಧಿ ಪಡಿಸಲಾಗಿದೆ. ಸಣ್ಣ ಗಾತ್ರದ ಮರವಾಗುವ ಈ ಮಂಗಳ ಅರ್ಲಿ ತಳಿಯ ಹಲಸಿನ ಮರವನ್ನು ಸ್ವಲ್ಪ ಸ್ಥಳಾವಕಾಶವಿರುವ ಮನೆಯವರೂ ಬೆಳೆಸಬಹುದು ಎನ್ನುತ್ತಾರೆ ಬಿ.ಸರ್ವೇಶ ರಾವ್
PublicNext
11/06/2022 05:23 pm