ಪುತ್ತೂರು: ಪ್ರಾಚೀನ ಗುಡಿ ಕೈಗಾರಿಕೆ ಕುಂಬಾರಿಕೆ ಇಂದು ಹಲವು ಸಮಸ್ಯೆ ಸುಳಿಯಲ್ಲಿ ಸಿಲುಕಿ ನಶಿಸುವತ್ತ ಸಾಗಿದೆ. ಕುಂಬಾರಿಕೆಯನ್ನೇ ಜೀವನವನ್ನಾಗಿಸಿದ್ದ ಕುಟುಂಬಗಳು ಈಗ ಪರ್ಯಾಯ ಉದ್ಯೋಗವನ್ನರಸುತ್ತಿದೆ. ಇಂತಹ ಕುಟುಂಬಗಳನ್ನು ಮತ್ತೆ ಒಂದುಗೂಡಿಸಿ ವೃತ್ತಿಯ ಪುನರುಜ್ಜೀವನಕ್ಕೆ ಕುಂಬಾರರ ಸಹಕಾರಿ ಸಂಘವೀಗ ಶ್ರಮಿಸುತ್ತಿದೆ.
ದ.ಕ. ಜಿಲ್ಲೆಯ ಪುತ್ತೂರಿನಲ್ಲಿರುವ ಕುಂಬಾರಿಕೆ ವಸ್ತು ಉತ್ಪಾದನೆ ಘಟಕ ಹೊಸ ವಿನ್ಯಾಸ ಮೂಲಕ ಆಧುನಿಕತೆಗೆ ತೆರೆದುಕೊಳ್ಳುತ್ತಿದೆಯಾದರೂ, ಕಚ್ಛಾವಸ್ತು ಕೊರತೆ ಮತ್ತು ಯುವ ಪೀಳಿಗೆಯ ನಿರಾಸಕ್ತಿ ಕುಂಬಾರಿಕೆ ವೃತ್ತಿ ಭವಿಷ್ಯಕ್ಕೆ ದೊಡ್ಡ ಹೊಡೆತ ನೀಡಿದೆ.
ಹಲವು ಸಮಸ್ಯೆಗಳು ಇಂದು ಕುಂಬಾರಿಕೆಯನ್ನು ಕಾಡುತ್ತಿದೆ. ಮಣ್ಣು, ಕಟ್ಟಿಗೆ ಕೊರತೆ ಹಾಗೂ ಪ್ಲಾಸ್ಟಿಕ್ ಪಾತ್ರೆಗಳ ಹಾವಳಿ ಕುಂಬಾರರು ಕುಂಬಾರಿಕೆ ವೃತ್ತಿ ತ್ಯಜಿಸುವ ಹಂತಕ್ಕೆ ಬಂದಿದೆ. ಪುತ್ತೂರಿನ ಕೌಡಿಚ್ಚಾರಿನಲ್ಲಿರುವ ಸಂಘದ ಉತ್ಪಾದನೆ ಘಟಕ ಇಂಥ ಹಲವು ಸಾಂಪ್ರದಾಯಿಕ ಕೈಗಳಿಗೆ ಉದ್ಯೋಗವಕಾಶ ಕಲ್ಪಿಸಿದೆ.
ಮಡಕೆ, ಕುಡಿಕೆ ಹೀಗೆ ಅಡುಗೆ ಸಾಮಗ್ರಿ ಮಾತ್ರ ಪೂರೈಸುತ್ತಿದ್ದ ಕುಂಬಾರಿಕೆ ಇಂದು ಕರಕುಶಲ ವಸ್ತು ತಯಾರಿಕೆಯಲ್ಲಿಯೂ ಸೈ ಎನಿಸಿಕೊಳ್ಳುತ್ತಿದೆ. ಉತ್ಪಾದನೆಯಲ್ಲೂ ಆಧುನಿಕ ತಂತ್ರಜ್ಞಾನ ಬಳಸುವ ಚಿಂತನೆ ನಡೆಸಿರುವ ಸಂಘ ಈಗಾಗಲೇ ಮಣ್ಣು ಹದಗೊಳಿಸುವ ಹಾಗೂ ಮಡಿಕೆ ತಯಾರಿ ಯಂತ್ರ ಬಳಸಿಕೊಳ್ಳುತ್ತಿದೆ. ಆದರೆ, ಇಲ್ಲಿ ಕೇವಲ ಹಿರಿಯ ತಲೆಮಾರು ಮಾತ್ರ ತೊಡಗಿಸಿಕೊಳ್ಳುತ್ತಿದ್ದು, ಕುಂಬಾರಿಕೆ ವೃತ್ತಿಯ ಆಸ್ತಿತ್ವ, ಭವಿಷ್ಯದ ಬಗ್ಗೆ ಚಿಂತೆ ಮೂಡಿಸಿದೆ.
Kshetra Samachara
25/07/2022 08:35 pm