ಉಡುಪಿ: ಉಡುಪಿಯ ಪಣಿಯಾಡಿ ಶ್ರೀ ಅನಂತಾಸನ ಶ್ರೀಲಕ್ಷ್ಮೀ ಅನಂತ ಪದ್ಮನಾಭ ದೇಗುಲದಲ್ಲಿ ಬ್ರಹ್ಮ ಕಲಶೋತ್ಸವದ ಪ್ರಯುಕ್ತ ಅಪರೂಪದ ಶ್ರೀನಿವಾಸ ಕಲ್ಯಾಣೋತ್ಸವ ನಡೆಯಿತು.
ಆನೆಗುಡ್ಡೆ ಕ್ಷೇತ್ರ ಸಿದ್ದಿವಿನಾಯಕ ದೇವಸ್ಥಾನದ ಅರ್ಚಕರಾದ ಶ್ರೀನಿವಾಸ ಉಪಾಧ್ಯಾಯರ ನೇತೃತ್ವದಲ್ಲಿ ವೈದಿಕ ಕಾರ್ಯಕ್ರಮಗಳು ನಡೆದವು. ರಾಯಚೂರು ಶೇಷಗಿರಿದಾಸ್ ಬೆಂಗಳೂರು ಮತ್ತು ಹರಿಚಂದನ್, ವೆಂಕಟೇಶ ತಿರುಪತಿ ಅವರ ಹಿನ್ನೆಲೆ ಗಾಯನದಲ್ಲಿ ಕಲ್ಯಾಣ ಉತ್ಸವ ವೈಭವದಿಂದ ಜರುಗಿತು.
ಪುತ್ತಿಗೆ ಮಠದ ಶ್ರೀ ಸುಗುಣೇಂದ್ರ ತೀರ್ಥರ ಮಾರ್ಗದರ್ಶನದಲ್ಲಿ ಕಲ್ಯಾಣೋತ್ಸವ ನಡೆಯಿತು. ಉಡುಪಿಯ ಕಡಗೋಲು ಕೃಷ್ಣನನ್ನು ಅನ್ನಬ್ರಹ್ಮ ಅಂತಲೂ ಕರೀತಾರೆ, ಇನ್ನು ತಿರುಪತಿ ತಿಮ್ಮಪ್ಪ ಕಾಂಚನ ಬ್ರಹ್ಮನಾಗಿ ವಿಶ್ವಮಾನ್ಯನಾಗಿದ್ದಾನೆ. ಎರಡು ವೈಷ್ಣವ ಕ್ಷೇತ್ರಗಳ ಸಮ್ಮಿಲನ ಹೊಸ ಧಾರ್ಮಿಕ ಸಮೀಕರಣವನ್ನೇ ಉಂಟುಮಾಡಿತು. ದೇವರು ಜನಸಾಮಾನ್ಯರಂತೆ ಭಕ್ತರ ಸಮ್ಮುಖದಲ್ಲಿ ಮದುವೆ ಮಾಡಿಕೊಳ್ಳುವ ಕಲ್ಪನೆಯೇ ಒಂದು ಅದ್ಬುತ!
ವೈವಿದ್ಯಮಯ ಪುಷ್ಪಗಳಿಂದ ಅಲಂಕರಿಸಿದ ಆಕರ್ಷಕ ವೇದಿಕೆಯಲ್ಲಿ ಕಲ್ಯಾಣೋತ್ಸವ ನಡೆಯಿತು. ಪುರೋಹಿತ ವರ್ಗ ಧಾರ್ಮಿಕ ವಿಧಿವಿಧಾನ ನಡೆಸಿಕೊಟ್ಟಿತು. ಈ ವೇಳೆ ಭಕ್ತಿಸುಧೆಯ ನಿನಾದ ಹಿತವಾದ ವಾತಾವರಣ ಸೃಷ್ಟಿಸಿತು. ವೇದವಿದ್ವಾಂಸರ ವೇಧಘೋಷ, ಭಜನಾತಂಡಗಳ ಭಕ್ತಿಪೂರ್ಣ ಭಜನೆ, ಚಂಡೆ ವಾದ್ಯಗಳ ನಿನಾದದಿಂದ ಅಕ್ಷರಶಃ ಭಾವಪೂರ್ಣ ಸನ್ನಿವೇಶ ನಿರ್ಮಾಣವಾಯ್ತು.
Kshetra Samachara
06/05/2022 03:22 pm