ಮಂಗಳೂರು: ಮಾವೊವಾದಿ ಸಂಘಟನೆಗಳಲ್ಲಿ ಗುರುತಿಸಿಕೊಂಡಿರುವ ಚಿನ್ನಿ ರಮೇಶ್‌ನನ್ನು ದೋಷ ಮುಕ್ತಗೊಳಿಸಿ ಮಂಗಳೂರಿನ ಪ್ರಧಾನ ಜಿಲ್ಲಾ ನ್ಯಾಯಾಲಯ ಆದೇಶಿಸಿದೆ.
2013ರ ನವೆಂಬರ್ 9ರಂದು ನಸುಕಿನ ವೇಳೆ 2 ಗಂಟೆ ಸುಮಾರಿಗೆ ಬೆಳ್ತಂಗಡಿಯ ಕುತ್ಲೂರು ಗ್ರಾಮದ ಕುಕ್ಕುಜೆ ಕ್ರಾಸ್ ನಲ್ಲಿರುವ ರಾಮಚಂದ್ರ ಭಟ್ ಎಂಬವರ ಮನೆಗೆ ಮಾವೊವಾದಿ ಸಂಘಟನೆಗಳಲ್ಲಿ ತೊಡಗಿಸಿಕೊಂಡಿರುವ ಚಿನ್ನಿ ರಮೇಶ್ ಅಲಿಯಾಸ್ ರಮೇಶ್ ಅಲಿಯಾಸ್ ಶಿವಕುಮಾರ್ ತನ್ನ ಸಹಚರರೊಂದಿಗೆ ಬಂದಿದ್ದ. ಈ ವೇಳೆ ಆತ ಮನೆಯ ಬಾಗಿಲನ್ನು ಬಡಿದು ರಾಮಚಂದ್ರ ಭಟ್‌ರನ್ನು ಹೊರಗೆ ಕರೆದಿದ್ದ. ಯಾರೂ ಹೊರಬಾರದಿದ್ದಾಗ ಮನೆಯಂಗಳದಲ್ಲಿ ನಿಲ್ಲಿಸಲಾಗಿದ್ದ ಬೈಕ್ ಹಾಗೂ ಓಮ್ನಿ ಕಾರಿಗೆ ಬೆಂಕಿ ಹಚ್ಚಿ ಸುಟ್ಟು ಹಾಕಿದ್ದಾರೆ. ಪರಿಣಾಮ 2,69,555 ರೂ. ನಷ್ಟವಾಗಿತ್ತು. ಈ ಬಗ್ಗೆ ಪ್ರಕರಣ ದಾಖಲಾಗಿ ಮಂಗಳೂರಿನ ಪ್ರಧಾನ ಜಿಲ್ಲಾ ನ್ಯಾಯಾಲಯದಲ್ಲಿ ದೋಷಾರೋಪಣಾ ಪಟ್ಟಿ ಸಲ್ಲಿಸಲಾಗಿತ್ತು.
ಬೆಂಗಳೂರಿನಲ್ಲಿ ಬೇರೊಂದು ಪ್ರಕರಣದಲ್ಲಿ ಬಂಧಿತನಾಗಿದ್ದ ಚಿನ್ನಿ ರಮೇಶ್‌ನನ್ನು ಉಡುಪಿಯಲ್ಲಿ ಎಸ್‌ಪಿಯಾಗಿದ್ದ ಅಣ್ಣಾಮಲೈ ವಶಕ್ಕೆ ತೆಗೆದುಕೊಂಡು ಪ್ರಕರಣದ ಆರೋಪಿತನೆಂದು ಗುರುತಿಸಿದ್ದರು. ಪರಿಣಾಮ ಪ್ರಕರಣವನ್ನು ಮರುತನಿಖೆಗೆ ಆದೇಶಿಸಲಾಗಿತ್ತು. ಮರುತನಿಖೆ ಆರಂಭಿಸಿದ ಡಿವೈಎಸ್ ಪಿ ರವೀಶ್ ಸಿ.ಆರ್. ಆರೋಪಿ ಚಿನ್ನಿ ರಮೇಶ್ ನನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿ ಆರೋಪ ಪಟ್ಟಿ ತಯಾರಿಸಿ 2017ಕ್ಕೆ ನ್ಯಾಯಾಲಯಕ್ಕೆ ಸಲ್ಲಿಸಿದ್ದರು.
ವಿಚಾರಣೆ ಆರಂಭಿಸಿದ ಮಂಗಳೂರಿನ ಜಿಲ್ಲಾ ಪ್ರಧಾನ ನ್ಯಾಯಾಲಯ ಆರೋಪ ಪಟ್ಟಿಯಲ್ಲಿದ್ದ ಒಟ್ಟು 22 ಸಾಕ್ಷಿಗಳಲ್ಲಿ 9 ಸಾಕ್ಷಿಗಳನ್ನು ವಿಚಾರಣೆ ನಡೆಸಿ ಅದರಲ್ಲಿ ಐವರು ಪ್ರತ್ಯಕ್ಷ ಸಾಕ್ಷಿಗಳಾಗಿದ್ದರು. 2013ರ ಸಂದರ್ಭ ಕುತ್ಲೂರು ಪ್ರದೇಶದಲ್ಲಿ ಅರಣ್ಯ ನಿವಾಸಿಗಳನ್ನು ಸರಕಾರ ಒಕ್ಕಲು ಎಬ್ಬಿಸುತ್ತಿದ್ದ ಸಂದರ್ಭ ದೂರುದಾರ ರಾಮಚಂದ್ರ ಭಟ್ ಅರಣ್ಯವಾಸಿಗಳನ್ನು ಒಕ್ಕಲೆಬ್ಬಿಸುವ ಕೆಲಸ ಮಾಡುತ್ತಿದ್ದರು. ಈ ಹಿನ್ನೆಲೆಯಲ್ಲಿ ನಕ್ಸಲರು ಈ ಕೃತ್ಯವನ್ನು ಮಾಡಿದ್ದಾರೆ ಎಂದು ಆರೋಪಿಸಲಾಗಿತ್ತು. ನ್ಯಾಯಾಲಯ ಅಂತಿಮ ನಿರ್ಣಾಯವನ್ನು ಪ್ರಕಟಿಸಿ ಆರೋಪಿ ಚಿನ್ನಿ ರಮೇಶ್ ನನ್ನು ದೋಷ ಮುಕ್ತಗೊಳಿಸಿ ಆದೇಶಿಸಿದೆ. ಚಿನ್ನಿ ರಮೇಶ್ ವಿರುದ್ಧ ಚಿಕ್ಕಮಗಳೂರಿನಲ್ಲಿ 4 ಕೇಸ್ ಗಳು ವಿಚಾರಣೆಯಲ್ಲಿ ಇದ್ದು ಪ್ರಸ್ತುತ ಬೆಂಗಳೂರು ಜೈಲ್ ನಲ್ಲಿ ಇದ್ದಾನೆ.
Kshetra Samachara
11/10/2022 04:06 pm