ಉಡುಪಿ: ಜಿಲ್ಲಾ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗ ಬ್ಯಾಂಕ್ ಆಫ್ ಬರೋಡದ ಮಣಿಪಾಲ ಶಾಖೆಗೆ ಸೇವಾ ನ್ಯೂನತೆ ಕಾರಣ ದಂಡ ವಿಧಿಸಿ ಆದೇಶಿಸಿದೆ.
ಉಡುಪಿಯ ಸಾಯಿನಾಥ್ ಶೇಟ್ ಅವರು ಮಣಿಪಾಲದ ಬ್ಯಾಂಕ್ ಆಫ್ ಬರೋಡದಲ್ಲಿ (ಹಿಂದಿನ ವಿಜಯ ಬ್ಯಾಂಕ್) ವಾಹನ ಸಾಲ ಪಡೆದಿದ್ದರು. ಸಾಲದ ಬಗ್ಗೆ ತಿಂಗಳ ಕಂತುಗಳನ್ನು ತಮ್ಮ ಉಳಿತಾಯ ಖಾತೆಯಿಂದ ವರ್ಗಾಯಿಸಲು ಸಮ್ಮತಿಸಿದ್ದರು. ಆ ಬಗ್ಗೆ ಉಳಿತಾಯ ಖಾತೆಯಲ್ಲಿ ಕನಿಷ್ಠ ಶುಲ್ಕ 1 ಸಾವಿರ ರೂ. ಇರುವಂತೆ ಜಮೆ ಮಾಡುತ್ತಿದ್ದರು. 2020ರ ಸೆ. 25ರಂದು ಬ್ಯಾಂಕ್ ಕನಿಷ್ಠ ಮೊತ್ತ 2 ಸಾವಿರ ರೂ. ನಿರ್ವಹಿಸದಿರುವ ಕಾರಣ ನೀಡಿ, ಅನಧಿಕೃತವಾಗಿ ಮತ್ತು ಅನುಮತಿಯಿಲ್ಲದೆ 650 ರೂ. ಮತ್ತು ಸಂದೇಶ ರವಾನೆ ಶುಲ್ಕವಾಗಿ 17.70 ರೂ. ಕಡಿತಗೊಳಿಸಿದ್ದು, ಈ ಸೇವಾ ನ್ಯೂನತೆಯಿಂದ ಸಾಯಿನಾಥ್ ಶೇಟ್ ಅವರ ಖಾತೆಯ ಸಿಬಿಲ್ ರೇಟಿಂಗ್ ಕಡಿತವಾಯಿತು. ಬ್ಯಾಂಕ್‌ನ ಸೇವಾ ನ್ಯೂನತೆ ಪ್ರಶ್ನಿಸಿ ಶೇಟ್ ಅವರು ನ್ಯಾಯವಾದಿ ಎಚ್.ಕೆ. ಮಲ್ಯ ಅವರ ಮೂಲಕ ಜಿಲ್ಲಾ ಗ್ರಾಹಕ ವ್ಯಾಜ್ಯ ಪರಿಹಾರ ಆಯೋಗಕ್ಕೆ ಸೂಕ್ತ ಪರಿಹಾರ ಕೋರಿ ದೂರು ಸಲ್ಲಿಸಿದ್ದರು
ಆಯೋಗವು ವಾದ-ಪ್ರತಿವಾದ ಆಲಿಸಿತು. “ಬ್ಯಾಂಕ್ ಆಫ್ ಬರೋಡವು ವಿಜಯ ಬ್ಯಾಂಕ್‌ನೊಂದಿಗೆ ವಿಲೀನಗೊಂಡಿದ್ದು, ಆ ಬಳಿಕ ಉಳಿತಾಯ ಖಾತೆಗಳಲ್ಲಿ ಕನಿಷ್ಠ ಶುಲ್ಕ 2 ಸಾವಿರ ರೂ. ಆಗಿದೆ. ಈ ಬಗ್ಗೆ ಬ್ಯಾಂಕ್‌ನ ಜಾಲತಾಣದಲ್ಲಿ ಪರಿಷ್ಕೃತ ನಿಯಮಾವಳಿಗಳನ್ನು ಸಾರ್ವಜನಿಕರ ಅವಗಾಹನೆಗೆ ನೀಡಿದ್ದು, ಯಾವುದೇ ಸೇವಾ ನ್ಯೂನತೆ ಆಗಿಲ್ಲ’ ಎಂದು ಪ್ರತಿವಾದಿ ಬ್ಯಾಂಕ್ ವಾದಿಸಿತು.ಆಯೋಗವು ಪ್ರತಿವಾದಿಯ ವಾದವನ್ನು ತಿರಸ್ಕರಿಸಿ, ಖಾತೆದಾರರಿಗೆ ನಿಯಮಾವಳಿಗಳ ಮಾಹಿತಿ ನೀಡದೆ ಏಕಪಕ್ಷೀಯವಾಗಿ ಅನಧಿಕೃತವಾಗಿ ದೂರುದಾರರ ಖಾತೆಯಿಂದ 650 ರೂ. ಕಡಿತ ಮಾಡಿರುವುದು ಸೇವಾ ನ್ಯೂನತೆ ಎಂದು ತೀರ್ಪು ನೀಡಿದೆ. ಪ್ರತಿವಾದಿ ಬ್ಯಾಂಕ್ ದೂರುದಾರರಿಗೆ 650 ರೂ.ಗಳನ್ನು 2020ರ ಸೆ. 25ರಿಂದ ಬಡ್ಡಿಸಹಿತ ನೀಡುವಂತೆ, ನಷ್ಟ ಪರಿಹಾರವಾಗಿ 5 ಸಾವಿರ ರೂ. ಮತ್ತು 5 ಸಾವಿರ ರೂ.ಗಳನ್ನು ವ್ಯಾಜ್ಯದ ಖರ್ಚಿಗೆ ಪಾವತಿಸುವಂತೆ ಆದೇಶಿಸಿತು ಎಂದು ಬಳಕೆದಾರರ ವೇದಿಕೆ ತಿಳಿಸಿದೆ.
Kshetra Samachara
30/08/2022 01:57 pm