ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಳ್ಳಾಲ: ಬಸ್ ಚಾಲಕನ ಬಿಡುಗಡೆ, ಮುಷ್ಕರ ಕೈಬಿಟ್ಟು ಓಡಾಟ ಆರಂಭಿಸಿದ ತಲಪಾಡಿ ಸಿಟಿ ಬಸ್

ಉಳ್ಳಾಲ: ಓವರ್ ಸ್ಪೀಡ್ ಆರೋಪದಡಿ ದಂಡ ಕಟ್ಟದ ಸಿಟಿ ಬಸ್ ಚಾಲಕನನ್ನು ಪೊಲೀಸರು ಬಂಧಿಸಿದ್ದನ್ನು ಖಂಡಿಸಿ ಬಸ್‌ ನೌಕರರು ಸಿಡಿದೆದ್ದು ತಲಪಾಡಿ ರೂಟ್ ಬಸ್‌ ಮುಷ್ಕರ ನಡೆಸಿದ್ದರು. ಸದ್ಯ ಚಾಲಕನ ಬಿಡುಗಡೆ ಆಗುತ್ತಿದ್ದಂತೆ ಮುಷ್ಕರ ಕೈಬಿಟ್ಟು ಟ್ರಾಫಿಕ್ ಎಎಸ್‌ಐ ವಿರುದ್ಧ ಕ್ರಮಕ್ಕೆ ಆಗ್ರಹಿಸಿದ್ದಾರೆ.

ಶನಿವಾರ ಬೆಳಿಗ್ಗೆ 42 ರೂಟ್ ನಂಬರ್‌ನ ಉಷಾ ಟ್ರಾವೆಲ್ಸ್ ಸಿಟಿ ಬಸ್‌ ಅನ್ನು ಮೇಲಿನ ತಲಪಾಡಿಯಲ್ಲಿ ಗಸ್ತಲ್ಲಿದ್ದ ಮಂಗಳೂರು ದಕ್ಷಿಣ ಸಂಚಾರಿ ಠಾಣಾ ಎಎಸ್‌ಐ ರಾಬರ್ಟ್ ಲಸ್ರಾದೊ ತಡೆದಿದ್ದರು. ಓವರ್ ಸ್ಪೀಡ್ ಕಾರಣವೊಡ್ಡಿ 1000 ರೂಪಾಯಿ ದಂಡ ಕಟ್ಟುವಂತೆ ಬಸ್ ನಿರ್ವಾಹಕ ದಯಾನಂದ್ ಅವರನ್ನ ಪೀಡಿಸಿದ್ದರಂತೆ. ಚೆಕ್ ಪೋಸ್ಟ್ ಇದ್ದ ಪ್ರದೇಶದಲ್ಲಿ ಹೇಗೆ ಸ್ಪೀಡ್ ಬರಲು ಸಾಧ್ಯ ಎಂದು ನಿರ್ವಾಹಕರು ಸಬೂಬು ನೀಡಿದ್ದಾರೆ. ಕೊನೆಗೆ ಎಎಸ್‌ಐ 500 ದಂಡ ಕಟ್ಟುವಂತೆ ಒತ್ತಡ ಹಾಕಿದ್ದು, ಮಾಡದ ತಪ್ಪಿಗೆ ದಂಡ ಪಾವತಿಸದ ಕಾರಣಕ್ಕೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಬಸ್ ಚಾಲಕ ಅಭಿರಾಜ್ ಅವರನ್ನ ಉಳ್ಳಾಲ ಪೊಲೀಸರಿಂದ ಬಂಧಿಸಿ ದೌರ್ಜನ್ಯ ಎಸಗಿರುವುದಾಗಿ ನಿರ್ವಾಹಕ ದಯಾನಂದ್ ಆರೋಪ ಮಾಡಿದ್ದರು. ಇದರಿಂದ ಆಕ್ರೋಶಗೊಂಡ ಬಸ್ ನೌಕರರು ಸುಮಾರು‌ ಮೂರು ತಾಸುಗಳ ಕಾಲ ತಲಪಾಡಿ ರೂಟ್ ಬಸ್‌ಗಳನ್ನೆಲ್ಲ ನಿಲ್ಲಿಸಿ ಮುಷ್ಕರ ನಡೆಸಿದರು.

ಈ ಮಧ್ಯೆ ದ.ಕ. ಸಿಟಿ ಬಸ್‌ ಮಾಲೀಕರ ಸಂಘದ ಅಧ್ಯಕ್ಷರಾದ ಜಯಶೀಲ ಅಡ್ಯಂತಾಯ ಅವರು ಉಳ್ಳಾಲ ಠಾಣಾಧಿಕಾರಿಯಲ್ಲಿ ಬಂಧಿತ ಬಸ್ಸು ಚಾಲಕ ಅಭಿರಾಜ್ ಅವರನ್ನ ಬಿಡುಗಡೆ ಮಾಡುವಂತೆ ಮಾತುಕತೆ ನಡೆಸಿದ್ದಾರೆ. ಪೊಲೀಸರು ಮುಚ್ಚಳಿಕೆ ಬರೆಸಿ ಚಾಲಕ ಅಭಿರಾಜ್ ಅವರನ್ನು ಬಿಡುಗಡೆ ಮಾಡುತ್ತಿದ್ದಂತೆ ಬಸ್ಸು ನೌಕರರು ಮುಷ್ಕರ ಕೈ ಬಿಟ್ಟಿದ್ದಾರೆ.

ಬಸ್‌ ನೌಕರರಿಂದ ಟ್ರಾಫಿಕ್ ಎಎಸ್‌ಐ ಅವರ ವಿರುದ್ಧ ನಿರಂತರ ದೂರುಗಳು ಕೇಳಿ ಬರುತ್ತಿದ್ದು ಟ್ರಾಫಿಕ್ ಹಿರಿಯ ಪೊಲೀಸ್ ಅಧಿಕಾರಿಗಳಲ್ಲಿ ಈ ಬಗ್ಗೆ ದೂರು ನೀಡುವುದಾಗಿ ಅಡ್ಯಂತಾಯ ಅವರು ಹೇಳಿದ್ದಾರೆ.

ಈ ಹಿಂದೆ ತೊಕ್ಕೊಟ್ಟಿನಲ್ಲಿ ಕಾರೊಂದನ್ನ ತಡೆದು ಅದರ ಗಾಜಲ್ಲಿದ್ದ ಕೊರಗಜ್ಜ ದೈವದ ಸ್ಟಿಕ್ಕರ್ ತೆಗೆಯಲು ಮುಂದಾಗಿ ಹಿಂದೂ ಕಾರ್ಯಕರ್ತರ ಆಕ್ರೋಶಕ್ಕೆ ಗುರಿಯಾಗಿದ್ದ ಎಎಸ್‌ಐ ಲಸ್ರಾದೊ ಮತ್ತೊಮ್ಮೆ‌ ಬಡಪಾಯಿ ಬಸ್ಸು ನೌಕರರ ಮೇಲೆರಗಿ ಸುದ್ದಿಯಾಗಿದ್ದಾರೆ.

Edited By : Nagesh Gaonkar
Kshetra Samachara

Kshetra Samachara

13/08/2022 10:43 pm

Cinque Terre

18.2 K

Cinque Terre

1

ಸಂಬಂಧಿತ ಸುದ್ದಿ