ಉಡುಪಿ: ಜಲಿಯನ್ ವಾಲಾಬಾಗ್ ನಲ್ಲಿ ಹುತಾತ್ಮರಾದ ಭಾರತೀಯ ಸೈನಿಕರು, ನಾಗರೀಕರ ನೆನಪಿನಲ್ಲಿ ಪ್ರತಿ ವರ್ಷ ಏ. 7 ರಿಂದ 14 ರವರೆಗೆ ಆಚರಿಸುವ ರಾಷ್ಟ್ರೀಯ ಸಪ್ತಾಹದಲ್ಲಿ ರಾಷ್ಟ್ರಧ್ವಜಗಳ ವಿಲೇವಾರಿ (ಅಂತ್ಯಸಂಸ್ಕಾರ) ಕಾನೂನುಬದ್ಧವಾಗಿ ಸರಕಾರಿ ಗೌರವದೊಂದಿಗೆ ನಡೆಯುತ್ತದೆ. ಹೀಗಾಗಿ ರಾಷ್ಟ್ರಧ್ವಜದ ನೀತಿ ಸಂಹಿತೆಗೆ ಚ್ಯುತಿಯಾಗದಂತೆ ನಡೆದುಕೊಳ್ಳಬೇಕು ಎಂದು ಭಾರತ ಸೇವಾದಳದ ಕೇಂದ್ರ ಸಮಿತಿ ಸದಸ್ಯ ತಿಮ್ಮಪ್ಪ ಶೆಟ್ಟಿ ಆರೂರು ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹರ್-ಘರ್-ತಿರಂಗಾ ಅಭಿಯಾನದಲ್ಲಿ ರಾಷ್ಟ್ರಧ್ವಜಕ್ಕೆ ಗೌರವ ನೀಡುವ ನಿಟ್ಟಿನಲ್ಲಿ ಮನೆ-ಮನೆಯಲ್ಲಿ ಹಾರಾಡಿಸುವ ರಾಷ್ಟ್ರಧ್ವಜವನ್ನು ಬೇಕಾಬಿಟ್ಟಿ ಎಸೆಯದೇ ಭದ್ರವಾಗಿಟ್ಟು ಕಾಪಾಡಿಕೊಳ್ಳಿ. ಮನೆಯಲ್ಲಿ ಇಡುವುದಕ್ಕೆ ಸಾಧ್ಯವಿಲ್ಲದೇ ಹೋದರೆ ಭಾರತ ಸೇವಾದಳ ಕಚೇರಿಗೆ ಮುಟ್ಟಿಸಿ ಎಂದರು.
ಉಡುಪಿ ಜಿಲ್ಲೆಯ ಅಜ್ಜರಕಾಡು ಮಹಾತ್ಮ ಗಾಂಧೀಜಿ ಜಿಲ್ಲಾ ಕ್ರೀಡಾಂಗಣ ಬಳಿಯಲ್ಲಿರುವ ಭಾರತ ಸೇವಾದಳ ಕಚೇರಿಗೆ ಧ್ವಜಗಳನ್ನು ಮುಟ್ಟಿಸಬಹುದು. ಹಳೆಯ, ಹರಿದ ಹಾಗೂ ಬಳಕೆಗೆ ಅಯೋಗ್ಯವಲ್ಲದ ರಾಷ್ಟ್ರಧ್ವಜಗಳನ್ನು ಇಲ್ಲಿ ಸಂಗ್ರಹಿಸಲಾಗುತ್ತದೆ. ಇಲ್ಲಿ ಸಂಗ್ರಹಿಸಿದ ಧ್ವಜಗಳನ್ನು ರಾಷ್ಟ್ರೀಯ ವಿಲೇವಾರಿಗೆ ಕಳುಹಿಸಲಾಗುತ್ತದೆ. ಅಲ್ಲಿ ರಾಷ್ಟ ನಾಯಕರ ಅಂತ್ಯಕ್ರಿಯೆ ನಡೆಸುವ ಮಾದರಿಯಲ್ಲಿ ಸರಕಾರಿ ಗೌರವದೊಂದಿಗೆ ರಾಷ್ಟ್ರಧ್ವಜಗಳನ್ನು ವಿಲೇವಾರಿ ಮಾಡಲಾಗುತ್ತದೆ ಎಂದು ವಿವರಿಸಿದರು.
ಹರ್-ಘರ್-ತಿರಂಗ ಅಭಿಯಾನದಲ್ಲಿ ಹಾರಾಡಿಸುವ ರಾಷ್ಟ್ರಧ್ವಜವನ್ನು ಶೇ. 90 ಡಿಗ್ರಿ ನೇರವಾಗಿ ನೆಟ್ಟು ಹಾರಿಸಿ. ಸಿಂಹದ ಚಿಹ್ನೆವುಳ್ಳ ರಾಷ್ಟ್ರಸ್ತಂಭದ ಮೇಲೆ ಹಾರಿಸುವ ರಾಷ್ಟ್ರಧ್ವಜವನ್ನು ಸಂಜೆಯ ಮುನ್ನ ಕೆಳಗಿಸಲೇಬೇಕು. 52 ಸೆಕೆಂಡ್ ನಲ್ಲಿ ಕೆಳಗಿಸಿ ಭೂಮಿಯನ್ನು ಸ್ಪರ್ಶ ಮಾಡದಂತೆ ನೋಡಿಕೊಳ್ಳಬೇಕು ಎಂದರು.
ಉಡುಪಿ ಜಿಲ್ಲಾ ಭಾರತ ಸೇವಾದಳದ ಮೂಲಕ ಧ್ವಜವನ್ನು ಅರಳಿಸುವ ಬಗ್ಗೆ ಜಿಲ್ಲಾಮಟ್ಟದಲ್ಲಿ ಕಾರ್ಯಾಗಾರ ಆಯೋಜಿಸಲಾಗಿದೆ. ಧ್ವಜ ಕಟ್ಟೆಯಲ್ಲಿ ಆರೋಹಣ, ಅವರೋಹಣ, ಶೋಕಾಚರಣೆ ಕುರಿತು ಪ್ರತ್ಯಕ್ಷವಾಗಿ ಧ್ವಜವನ್ನು ಕಟ್ಟುವ, ಹಾರಿಸುವ, ಇಳಿಸುವ ಕ್ರಮದ ಬಗ್ಗೆ ಮಾಹಿತಿ ನೀಡಿದ್ದೇವೆ. ಎಂದರು.
PublicNext
13/08/2022 10:27 pm