ಕುಂದಾಪುರ : ಉಡುಪಿ ಜಿಲ್ಲಾ ಪೊಲೀಸ್ ಮತ್ತು ಜೇಸಿಐ ಕುಂದಾಪುರ ಇವರ ಜಂಟಿ ಆಶ್ರಯದಲ್ಲಿ ಕುಂದಾಪುರ ಉಪ-ವಿಭಾಗ ಮಟ್ಟದ ಪೊಲೀಸ್ ಅಧಿಕಾರಿ ಹಾಗೂ ಸಿಬ್ಬಂದಿಯವರಿಗೆ ಒಂದು ದಿನದ ಒತ್ತಡ ನಿರ್ವಹಣೆ ಕಾರ್ಯಾಗಾರ ಕುಂದಾಪುರದ ವ್ಯಾಸರಾಜ ಸಭಾಭವನದಲ್ಲಿ ನಡೆಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕುಂದಾಪುರ ಉಪವಿಭಾಗದ ಪೊಲೀಸ್ ಉಪಾಧೀಕ್ಷಕರಾದ ಶ್ರೀಕಾಂತ್ ಕೆ ಅವರು ಮಾತನಾಡಿ, ಪೊಲೀಸ್ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುವವರಿಗೆ ಒತ್ತಡ ಸಾಮಾನ್ಯ. ಅದನ್ನು ಸಮಾಧಾನವಾಗಿ ಬಗೆಹರಿಸುವ ಕಲೆ ನಾವೆಲ್ಲ ಅರಿತರೆ ಆರೋಗ್ಯವಂತ ಜೀವನವನ್ನು ನಡೆಸಬಹುದು. ಸಮಾಜದಲ್ಲಿ ಪ್ರತಿಯೊಂದು ವ್ಯವಸ್ಥೆಗೂ ಪರ್ಯಾಯ ವ್ಯವಸ್ಥೆ ಇದೆ. ಆದರೆ ಪೊಲೀಸ್ ಇಲಾಖೆಗೆ ಪರ್ಯಾಯವಾದ ವ್ಯವಸ್ಥೆ ಇಲ್ಲ. ಹಾಗಾಗಿ ನಾವು ಜನಸೇವಕರಾಗಿ ಜನರ ಕಷ್ಟಗಳನ್ನು ಹೋಗಲಾಡಿಸುವತ್ತ ಪ್ರಾಮಾಣಿಕ ಪ್ರಯತ್ನ ನಡೆಸಬೇಕು ಎಂದರು.
ಜೇಸಿಐ ಕುಂದಾಪುರ ಇದರ ಅಧ್ಯಕ್ಷೆ ನಾಗರತ್ನ ಹೇರ್ಳೆ ಅವರು ಮಾತನಾಡಿ, ಹಗಲಿರುಳೆನ್ನದೆ ಸಮಾಜದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು ಪ್ರಯತ್ನಿಸುತ್ತಿರುವ ಪೊಲೀಸರಿಗೆ ತರಬೇತಿ ನೀಡಲು ಅವಕಾಶ ಸಿಕ್ಕಿರುವುದು ನಮ್ಮ ಸಂಸ್ಥೆಗೆ ಹೆಮ್ಮೆಯ ವಿಷಯ. ತರಬೇತಿಯ ಸದುಪಯೋಗವನ್ನು ಎಲ್ಲರೂ ಪಡೆದುಕೊಂಡರೆ ನಮ್ಮ ಶ್ರಮ ಸಾರ್ಥಕ ಎಂದರು.
ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆ ಹೆಡ್ ಕಾನ್ಸ್ಟೇಬಲ್ ಮಧುಸೂದನ ಅವರು ಕಾರ್ಯಕ್ರಮವನ್ನು ನಿರೂಪಿಸಿದರು.
ಈ ಸಂದರ್ಭದಲ್ಲಿ ತರಬೇತುದಾರರಾದ ಜೇಸಿ ಜಗದೀಶ್ ಜೋಗಿ, ವಲಯ ತರಬೇತುದಾರರಾದ ಜೇಸಿ ಅಕ್ಷತಾ ಗಿರೀಶ್ ಐತಾಳ್, ಜೇಸಿಐ ಕುಂದಾಪುರ ಇದರ ಕಾರ್ಯದರ್ಶಿ ಜೇಸಿ ರಾಕೇಶ್ ಶೆಟ್ಟಿ, ಕಂಡ್ಲೂರು ಗ್ರಾಮಾಂತರ ಠಾಣೆಯ ಪೊಲೀಸ್ ಉಪ ನಿರೀಕ್ಷಕ ನಿರಂಜಿನ ಗೌಡ, ಕುಂದಾಪುರ ಪೊಲೀಸ್ ಠಾಣೆ ಪೊಲೀಸ್ ಉಪ ನಿರೀಕ್ಷಕ ಸದಾಶಿವ ಗೌರೋಜಿ ಅವರು ಉಪಸ್ಥಿತರಿದ್ದರು.
Kshetra Samachara
08/08/2022 08:14 pm