ಮಂಗಳೂರು: "ಗಾಂಧೀಜಿಯನ್ನೇ ಬಿಟ್ಟಿಲ್ಲ, ಮತ್ತೆ ನಿಮ್ಮನ್ನು ಬಿಡುತ್ತೇವಾ" ಎಂದು ರಾಜ್ಯ ಸರಕಾರಕ್ಕೆ ಬೆದರಿಕೆ ಒಡ್ಡಿರುವ ಹಿಂದೂ ಮಹಾಸಭಾದ ಮುಖಂಡನ ಮೇಲೆ ನಗರದ ಬರ್ಕೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಅಖಿಲ ಭಾರತ ಹಿಂದೂ ಮಹಾಸಭಾದ ರಾಜ್ಯ ಪ್ರಧಾನ ಕಾರ್ಯದರ್ಶಿ ಧರ್ಮೇಂದ್ರ ಮೇಲೆ ಪ್ರಕರಣ ದಾಖಲಾಗಿದೆ.
ಮೈಸೂರಿನ ನಂಜನಗೂಡಿನಲ್ಲಿ ದೇವಸ್ಥಾನ ಕೆಡವಿರುವ ಘಟನೆಯನ್ನು ಖಂಡಿಸಿ ಇಂದು ಖಾಸಗಿ ಹೊಟೇಲೊಂದರಲ್ಲಿ ಅಖಿಲ ಭಾರತ ಹಿಂದೂ ಮಹಾ ಸಭಾದ ರಾಜ್ಯ ಕಾರ್ಯದರ್ಶಿ ಧರ್ಮೇಂದ್ರ ಪತ್ರಿಕಾಗೋಷ್ಠಿ ನಡೆಸಿದ್ದರು. ಈ ಸಂದರ್ಭ ಅವರು "ನಾವು ಗಾಂಧೀಜಿಯವರನ್ನೇ ಬಿಟ್ಟಿಲ್ಲ ಇನ್ನು ಹಿಂದೂ ಧರ್ಮಕ್ಕೆ ವಿರುದ್ಧವಾಗಿರುವವರನ್ನು ಬಿಡುತ್ತೇವಾ" ಎಂದು ಸರಕಾರಕ್ಕೆ ಎಚ್ಚರಿಕೆ ನೀಡಿದ್ದರು. ಈ ಬಗ್ಗೆ ಅಖಿಲ ಭಾರತ ಹಿಂದೂ ಮಹಾಸಭಾದ ರಾಜ್ಯಾಧ್ಯಕ್ಷ ಲೋಹಿತ್ ಕುಮಾರ್ ಸುವರ್ಣ ಅವರು, ಧರ್ಮೇಂದ್ರ ಸರಕಾರಕ್ಕೆ ಬೆದರಿಕೆ ಒಡ್ಡಿದ್ದಾರೆಂದು ಆರೋಪಿಸಿ ನಗರದ ಬರ್ಕೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಈ ಬಗ್ಗೆ ಬರ್ಕೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Kshetra Samachara
18/09/2021 10:23 pm