ಮಂಗಳೂರು: ನಗರದ ವೀರೂ ಟಾಕೀಸ್ ಪ್ರೊಡಕ್ಷನ್ಸ್ ಸಂಸ್ಥೆಯಿಂದ ಕನ್ನಡದ ಖ್ಯಾತ ನಟಿ ಪದ್ಮಜಾ ರಾವ್ ಸಾಲ ಪಡೆದಿದ್ದು, ಇದೀಗ ಅವರ ಮೇಲೆ 40 ಲಕ್ಷ ರೂ. ಚೆಕ್ ಬೌನ್ಸ್ ಪ್ರಕರಣದ ಮೇಲಿನ ಆರೋಪ ಕೇಳಿ ಬಂದಿದೆ.
ಈ ಹಿನ್ನೆಲೆಯಲ್ಲಿ ನಟಿ ಪದ್ಮಜಾ ರಾವ್ ಮಂಗಳೂರಿನ ಐದನೇ ಜೆಎಂಎಫ್ ಸಿ ನ್ಯಾಯಾಲಯದ ಮುಂದೆ ಹಾಜರಾದರು.
ನಟ, ನಿರ್ದೇಶಕ ವೀರೇಂದ್ರ ಶೆಟ್ಟಿಯವರ ಒಡೆತನದ ಮಂಗಳೂರಿನ ವೀರೂ ಟಾಕೀಸ್ ಪ್ರೊಡಕ್ಷನ್ಸ್ ಸಂಸ್ಥೆಯಿಂದ ನಟಿ ಪದ್ಮಜಾ ರಾವ್ ಅವರು ಹಂತಹಂತವಾಗಿ 41 ಲಕ್ಷ ರೂ. ಸಾಲ ಪಡೆದಿದ್ದರು. ಸಾಲಕ್ಕೆ ಭದ್ರತೆಯಾಗಿ 40 ಲಕ್ಷ ರೂ. ಚೆಕ್ ನೀಡಿದ್ದರು. ಬಳಿಕ ಪದ್ಮಜಾ ರಾವ್ ಸಾಲ ಹಿಂದಿರುಗಿಸದ ಹಿನ್ನೆಲೆಯಲ್ಲಿ ಚೆಕ್ ಅನ್ನು ಬ್ಯಾಂಕ್ ಗೆ ಹಾಕಲಾಗಿತ್ತು. ಆದರೆ, ಅವರ ಖಾತೆಯಲ್ಲಿ ಹಣವಿಲ್ಲದ ಕಾರಣ ಚೆಕ್ ಬೌನ್ಸ್ ಆಗಿತ್ತು. ಈ ಹಿನ್ನೆಲೆಯಲ್ಲಿ ಪ್ರಕರಣ ನ್ಯಾಯಾಲಯದ ಮೆಟ್ಟಿಲೇರಿತ್ತು. ಈ ಪ್ರಕರಣವನ್ನು ಕೈಗೆತ್ತಿಕೊಂಡ ಮಂಗಳೂರಿನ ಐದನೇ ಜೆಎಂಎಫ್ ಸಿ ನ್ಯಾಯಾಲಯ ಪದ್ಮಜಾ ರಾವ್ ಅವರಿಗೆ ಸಮನ್ಸ್ ನೀಡಿದ್ದು, ಅದನ್ನು ಸ್ವೀಕರಿಸಲು ನಿರಾಕರಿಸಿದ ಹಿನ್ನೆಲೆಯಲ್ಲಿ ಅವರಿಗೆ ವಾರಂಟ್ ಜಾರಿ ಮಾಡಲಾಗಿತ್ತು. ಈ ಹಿನ್ನೆಲೆಯಲ್ಲಿ ಅವರು ಇಂದು ಐದನೇ ಜೆಎಂಎಫ್ ಸಿ ನ್ಯಾಯಾಲಯದ ಮುಂದೆ ಹಾಜರಾದರು.
ಬಳಿಕ ಮಾತನಾಡಿದ ನಟಿ ಪದ್ಮಜಾ ರಾವ್, ನನಗೆ ಕಾನೂನು ಹಾಗೂ ನ್ಯಾಯಾಲಯದ ಮೇಲೆ ಸಂಪೂರ್ಣ ಭರವಸೆ ಇದೆ. ನಾನು ಈ ಪ್ರಕರಣದಲ್ಲಿ ಗೆದ್ದೇ ಗೆಲ್ಲುವೆನೆಂಬ ಭರವಸೆ ನೂರು ಪ್ರತಿಶತವಿದೆ. ಇದಕ್ಕಾಗಿ ಎಲ್ಲರೂ ಕಾಯಬೇಕಷ್ಟೇ, ಈಗ ನಾನು ಈ ಬಗ್ಗೆ ಏನೂ ಹೇಳಲಾರೆ ಎಂದರು.
Kshetra Samachara
12/02/2021 02:56 pm