ಮಂಗಳೂರು: ನಗರದಲ್ಲಿ ಇತ್ತೀಚೆಗೆ ಕೆಲ ಧಾರ್ಮಿಕ ಕೇಂದ್ರಗಳ ಹುಂಡಿಯಲ್ಲಿ ಅನುಚಿತ ವಸ್ತುಗಳು ಹಾಗೂ ಅಸಹ್ಯಕರ ರೀತಿಯಲ್ಲಿ ಬರೆದ ಕಾಗದಗಳನ್ನು ಹಾಕಿರುವಂತದ್ದು ಪೊಲೀಸ್ ಇಲಾಖೆಯ ಗಮನಕ್ಕೆ ಬಂದಿದೆ. ಇದಕ್ಕೆ ಸಂಬಂಧಿಸಿದಂತೆ ನಾಲ್ಕೈದು ಪೊಲೀಸ್ ಠಾಣೆಗಳಲ್ಲಿ ಪ್ರಕರಣಗಳು ದಾಖಲಾಗಿವೆ. ಈ ರೀತಿಯ ಕೃತ್ಯ ಎಸಗಿರುವವರ ಬಗ್ಗೆ ಮಾಹಿತಿ ಇರುವ ಸಾರ್ವಜನಿಕರು ಹತ್ತಿರದ ಪೊಲೀಸ್ ಠಾಣೆ ಹಾಗೂ ನೇರವಾಗಿ ನನಗೆ ಮಾಹಿತಿ ನೀಡಬಹುದು ಎಂದು ಮಂಗಳೂರು ನಗರ ಪೊಲೀಸ್ ಆಯುಕ್ತ ಶಶಿಕುಮಾರ್ ಎನ್. ಹೇಳಿದರು.
ಈ ಮೂಲಕ ಇಂತಹ ಕೃತ್ಯಗಳನ್ನು ನಡೆಸುವ ಕಿಡಿಗೇಡಿಗಳನ್ನು ಕಾನೂನಿನ ಚೌಕಟ್ಟಿನಲ್ಲಿ ಬಂಧಿಸಲು ಸಹಕಾರಿಯಾಗುತ್ತದೆ. ಸಾರ್ವಜನಿಕರು ಈ ಬಗ್ಗೆ ಮಾಹಿತಿ ಇದ್ದಲ್ಲಿ ಪೊಲೀಸ್ ಕಂಟ್ರೋಲ್ ದೂರವಾಣಿ ಸಂಖ್ಯೆ 9480802300ಗೆ ವಾಟ್ಸ್ಆ್ಯಪ್ ಅಥವಾ ಮೆಸೇಜ್ ಮೂಲಕ ತಿಳಿಸಬಹುದು ಎಂದು ಪೊಲೀಸ್ ಕಮಿಷನರ್ ವಿನಂತಿಸಿಕೊಂಡರು.
ಈ ರೀತಿಯ ಕೃತ್ಯಗಳಲ್ಲಿ ತೊಡಗಿಕೊಂಡವರು ತಕ್ಷಣ ಅದನ್ನು ನಿಲ್ಲಿಸಬೇಕು. ಅಲ್ಲದೆ, ಇದಕ್ಕೆ ಸಂಬಂಧಿಸಿದಂತೆ ಆರೋಪಿಗಳನ್ನು ಪತ್ತೆಹಚ್ಚುವ ಕೆಲಸ ಶೀಘ್ರ ಮಾಡಲಿದ್ದೇವೆ. ಅಲ್ಲದೆ ಯಾವುದೇ ಧರ್ಮದ ಧಾರ್ಮಿಕ ಕೇಂದ್ರಗಳು ಇರಬಹುದು ಅಲ್ಲಿನ ಆಡಳಿತ ಸಮಿತಿ ಇಂತಹ ಕಡೆಗಳಲ್ಲಿ ಸಿಸಿ ಕ್ಯಾಮೆರಾ ಅಳವಡಿಸುವುದು, ಸೂಕ್ತ ಭದ್ರತಾ ವ್ಯವಸ್ಥೆ ನಿಯೋಜಿಸುವ ಕಾರ್ಯ ಮಾಡಬೇಕೆಂದು ಕಮಿಷನರ್ ಮನವಿ ಮಾಡಿದರು.
ಮಂಗಳೂರು ಅತಿ ಸಾಮರಸ್ಯದಿಂದ ಇರುವ ನಗರ. ಇತರ ರಾಜ್ಯಗಳಲ್ಲದೆ, ದೇಶ-ವಿದೇಶಗಳಿಂದಲೂ ಬಂದು ಜನರು ಇಲ್ಲಿ ವಾಸಿಸುತ್ತಿದ್ದಾರೆ. ಕಿಡಿಗೇಡಿಗಳ ಇಂತಹ ಕುಕೃತ್ಯದಿಂದಾಗಿ ಮಂಗಳೂರು ಬ್ರ್ಯಾಂಡ್ ಹಾಳಾಗಬಾರದು ಎಂದು ಪೊಲೀಸ್ ಆಯುಕ್ತ ಶಶಿಕುಮಾರ್ ತಿಳಿಸಿದರು.
Kshetra Samachara
23/01/2021 02:29 pm