ಮಂಗಳೂರು: ಕೋಮು ಸೂಕ್ಷ್ಮ ಪ್ರದೇಶಗಳಿಗೆ ದಕ್ಷ, ಪ್ರಾಮಾಣಿಕ, ಸಾರ್ವಜನಿಕರೊಂದಿಗೆ ಗೌರವದಿಂದ ವ್ಯವಹರಿಸುವ ಪೊಲೀಸ್ ಅಧಿಕಾರಿಗಳನ್ನು ನೇಮಕ ಮಾಡಿದ್ದಲ್ಲಿ ಶೇ.50ರಷ್ಟು ಶಾಂತಿ ಸುವ್ಯವಸ್ಥೆ ಕಾಪಾಡಲು ಸಾಧ್ಯ ಎಂದು ಕರ್ನಾಟಕ ರಾಜ್ಯ ಅಲ್ಪಸಂಖ್ಯಾತರ ಆಯೋಗದ ಅಧ್ಯಕ್ಷ ಅಬ್ದುಲ್ ಅಜೀಮ್ ಹೇಳಿದರು.
ಕರ್ನಾಟಕ ರಾಜ್ಯ ಅಲ್ಪಸಂಖ್ಯಾತರ ಆಯೋಗದ ಅಧ್ಯಕ್ಷರಾಗಿ ಆಯ್ಕೆಯಾದ ಬಳಿಕ ಮೊದಲ ಬಾರಿಗೆ ದ.ಕ.ಜಿಲ್ಲಾ ಪ್ರವಾಸ ಕೈಗೊಂಡು ಸಾರ್ವಜನಿಕರೊಂದಿಗೆ ಸಭೆ ನಡೆಸಿ ಬಳಿಕ ಸುದ್ದಿಗಾರರನ್ನು ಉದ್ದೇಶಿಸಿ ಮಾತನಾಡಿದ ಅವರು, ಅದಕ್ಷ ಪೊಲೀಸ್ ಅಧಿಕಾರಿಗಳಿಂದಾಗಿ ಕಿಡಿಗೇಡಿಗಳ ದಾಂಧಲೆ ಇನ್ನೂ ಹೆಚ್ಚಾಗುವ ಸಾಧ್ಯತೆಯಿದ್ದು, ಪೊಲೀಸರು ತಮ್ಮ ನಡೆ- ನುಡಿಗಳಿಂದಲೂ ಸಾರ್ವಜನಿಕರಿಂದ ಗೌರವ ಗಳಿಸಬೇಕಾಗಿದೆ. ಈ ಬಗ್ಗೆ ಸರಕಾರಕ್ಕೂ ಮನವಿ ಮಾಡಲಾಗುತ್ತದೆ ಎಂದರು.
ಈ ಬಾರಿ ನೆರೆ ಹಾಗೂ ಕೊರೊನಾ ಸಂಕಷ್ಟದಿಂದ ಅಲ್ಪಸಂಖ್ಯಾತ ಇಲಾಖೆಗೆ ಸಾಕಷ್ಟು ಅನುದಾನಗಳು ಲಭ್ಯವಾಗಿಲ್ಲ. ಮುಂದಿನ ದಿನಗಳಲ್ಲಿ ಅನುದಾನಗಳು ಸರಿಯಾಗಿ ದೊರಕುವಂತೆ ಸರಕಾರಕ್ಕೆ ಮನವಿ ಮಾಡಲಾಗುತ್ತದೆ. ಮುಂದಿನ ವಿಧಾನ ಪರಿಷತ್ ಕಲಾಪದಲ್ಲಿ ಅಲ್ಪಸಂಖ್ಯಾತ ವಿದ್ಯಾರ್ಥಿಗಳ ಸ್ಕಾಲರ್ ಶಿಪ್ ನಿಲ್ಲಿಸಲಾಗಿರುವ ಬಗ್ಗೆ ಹಾಗೂ ವಕ್ಫ್ ಆಸ್ತಿಯನ್ನು ಉಳಿಸುವ ಬಗ್ಗೆ ಚರ್ಚೆ ನಡೆಸಿ ಸರಕಾರದ ಗಮನ ಸೆಳೆಯಲಾಗುತ್ತದೆ ಎಂದು ಅಬ್ದುಲ್ ಅಜೀಮ್ ಹೇಳಿದರು.
Kshetra Samachara
18/01/2021 03:48 pm