ವರದಿ: ರಹೀಂ ಉಜಿರೆ
ಉಡುಪಿ ; ಉಡುಪಿಯ ಅಷ್ಠ ಮಠಗಳಲ್ಲೇ ವಿವಾದಗ್ರಸ್ತ ಮಠ ಎಂಬ ಖ್ಯಾತಿ /ಕುಖ್ಯಾತಿ ಶಿರೂರು ಮಠದ್ದು.ಈ ಮಠದ ಲಕ್ಷ್ಮೀವರತೀರ್ಥ ಶ್ರೀಗಳ ಸಾವಿನ ಬಳಿಕ ಬಾಲಸನ್ಯಾಸಿಗೆ ದೀಕ್ಷೆ ನೀಡಿದ್ದನ್ನು ಪ್ರಶ್ನಿಸಿ, ಲಕ್ಷ್ಮೀವರ ಶ್ರೀಗಳ ಭಕ್ತರು ಹೈಕೋರ್ಟ್ ಮೆಟ್ಟಿಲೇರಿದ್ದರು. ಆದರೆ ಹೈಕೋರ್ಟ್ ಅರ್ಜಿ ವಜಾಗೊಳಿಸಿ ಆದೇಶ ನೀಡಿದೆ! ಇಷ್ಡಕ್ಕೂ ಏನಿದು ಬಾಲ ಸನ್ಯಾಸ ವಿವಾದ?
ಶೀರೂರು ಲಕ್ಷ್ಮೀವರ ತೀರ್ಥರು ವೃಂದಾವನಸ್ಥರಾದ ಎರಡೂವರೆ ವರ್ಷಗಳ ಬಳಿಕ, ದಕ್ಷಿಣ ಕನ್ನಡ ಮೂಲದ 16 ವರ್ಷದ ಅನಿರುದ್ಧ ಸರಳತ್ತಾಯ ಎಂಬ ಬಾಲ ಸನ್ಯಾಸಿಗೆ ಶಿರೂರು ಮಠದ ನೂತನ ಯತಿಯಾಗಿ ಪಟ್ಟಾಭಿಷೇಕ ಮಾಡಲಾಗಿತ್ತು. ನೂತನ ಯತಿ ಬಾಲ ಸನ್ಯಾಸಿ, ಸಣ್ಣ ಪ್ರಾಯದಲ್ಲಿ ಸನ್ಯಾಸ ದೀಕ್ಷೆ ನೀಡಿದ್ದು ತಪ್ಪು ಎಂದು ದೀಕ್ಷೆ ನೀಡಿದ ಸೋದೆ ಶ್ರೀಗಳ ವಿರುದ್ಧ ವೃಂದಾವನಸ್ಥರಾದ ಲಕ್ಷ್ಮೀವರ ಶ್ರಿಗಳ ಭಕ್ತರು ಹೈಕೋರ್ಟ್ ಮೊರೆ ಹೊಗಿದ್ದರು. ಆದರೆ ವಾದ ವಿವಾದ ಆಲಿಸಿದ ಹೈಕೋರ್ಟ್ ಇವತ್ತು ಲಕ್ಷ್ಮೀವರ ಶ್ರೀಗಳ ಭಕ್ತರು ಸಲ್ಲಿಸಿದ್ದ ಅರ್ಜಿಯನ್ನು ವಜಾ ಗೊಳಿಸಿದೆ.
ಇನ್ನು ಹೈಕೋರ್ಟ್ ತೀರ್ಪಿನಿಂದ ಶಿರೂರು ಮಠದಲ್ಲಿ ಸಂಭ್ರಮ ಮನೆ ಮಾಡಿದೆ. ಶಿರೂರು ಮಠದ ಎದುರು ಶಿರೂರು ಮಠದ ಭಕ್ತರು ಪಟಾಕಿ ಸಿಡಿಸಿ ಸಂಭ್ರಮಾಚರಣೆ ಮಾಡಿದ್ದಾರೆ.ಇತ್ತ ಹೈಕೋರ್ಟ್ ತೀರ್ಪನಿಂದ ಲಕ್ಷ್ಮೀವರ ಶ್ರೀಗಳ ಭಕ್ತರು ಮುಂದಿನ ನಡೆ ಬಗ್ಗೆ ಚಿಂತನೆ ನಡೆಸುತ್ತಿದ್ದಾರೆ. ವಕೀಲರ ಜೊತೆಗೆ ಚರ್ಚಿಸಿ ಮುಂದಿನ ನಡೆಯ ಬಗ್ಗೆ ತೀರ್ಮಾನಕ್ಕೆ ಬರುತ್ತೇವೆ ಎಂದು ಪ್ರತಿಕ್ರಿಯೆ ನೀಡಿದ್ದಾರೆ.
ಒಟ್ಟಾರೆ, ಹೈಕೋರ್ಟ್ ತೀರ್ಪಿನಿಂದ ಸೋದೆ ಹಾಗೂ ಶಿರೂರು ಮಠದ ಬಾಲ ಸನ್ಯಾಸಿ ನಿಟ್ಟುಸಿರು ಬಿಟ್ಟಿದ್ದಾರೆ. ಆದರೆ ಬಾಲಸನ್ಯಾಸ ವಿವಾದ ಇಲ್ಲಿಗೆ ನಿಲ್ಲುತ್ತಾ ಅಥವಾ ಲಕ್ಷ್ಮೀವರ ಶ್ರೀಗಳ ಭಕ್ತರು ಸುಪ್ರಿಂ ಕೋರ್ಟ್ ಮೆಟ್ಟಿಲೇರುತ್ತಾರಾ ಎಂಬುದನ್ನು ಕಾದು ನೋಡಬೇಕಿದೆ.
Kshetra Samachara
29/09/2021 05:15 pm