ಬಂಟ್ವಾಳ : ಟ್ರಾಫಿಕ್ ಪೊಲೀಸರು ಪ್ರತಿ ದಿನ ಧೂಳಿನಲ್ಲಿ ನಿಲ್ಲುವವರು. ಮಳೆಯನ್ನು ಲೆಕ್ಕಿಸದೆ ಕೆಲಸ ಮಾಡುವವರು. ಸಾರ್ವಜನಿಕರಿಂದ ಗರಿಷ್ಠ ಗೊಣಗಾಟವನ್ನೂ ಕೇಳುವವರು. ವಾಹನಗಳನ್ನು ನಿಲ್ಲಿಸಿ ತಪಾಸಣೆ ಮಾಡುವುದು ಅಥವಾ ಸುಗಮ ವಾಹನ ಸಂಚಾರಕ್ಕೆ ತೊಡಗಿಸಿಕೊಳ್ಳುವಂತೆ ಮಾಡುವುದು ಇವರ ನಿತ್ಯದ ಡ್ಯೂಟಿ.
ಆದರೆ ಧೂಳಿನಲ್ಲಿ ಮುಳುಗಿರುವ ಬಸ್ ನಿಲ್ದಾಣವನ್ನು ವಾರಕ್ಕೊಮ್ಮೆ ಸದ್ದಿಲ್ಲದೆ ಸ್ವಚ್ಛಗೊಳಿಸುತ್ತಿದ್ದಾರೆ ಬಂಟ್ವಾಳ ಸಂಚಾರಿ ಠಾಣಾ ಪೊಲೀಸರು. ಅದೂ ಕಲ್ಲಡ್ಕದಲ್ಲಿ.ಹೀಗೆ ಲಾಠಿ ಹಿಡಿಯುವ ಕೈಯಲ್ಲಿ ಪೊರಕೆ, ನೀರಿನ ಪೈಪ್ ಹಿಡಿದು ನಾವು ಸ್ವಚ್ಛತೆಯಲ್ಲಿ ಹಿಂದೆ ಬಿದ್ದಿಲ್ಲ ಎಂದು ತೋರಿಸಿಕೊಟ್ಟವರು ಎಎಸ್ ಐ ವಿಜಯ ಕುಮಾರ್ ಮತ್ತು ತಂಡ.
ರಾಷ್ಟ್ರೀಯ ಹೆದ್ದಾರಿ ಕಾಮಗಾರಿಯಿಂದಾಗಿ ಧೂಳು ಕೆಸರಿನಿಂದ ಕೂಡಿದ್ದ ಕಲ್ಲಡ್ಕ ಬಸ್ ನಿಲ್ದಾಣವನ್ನು ಪ್ರತಿ ವಾರಕ್ಕೊಮ್ಮೆ ನೀರು ಹಾಕಿ ಇವರ ತಂಡ ಸ್ವಚ್ಛ ಮಾಡುತ್ತದೆ. ಕಲ್ಲಡ್ಕದ ಮಹಾಧೂಳಿಗೆ ಬಸ್ ನಿಲ್ದಾಣ ಅಕ್ಷರಶಃ ಮುಚ್ಚಿಹೋದಂತಾಗಿದೆ. ಸಾರ್ವಜನಿಕರು ಬಸ್ ನಿಲ್ದಾಣದೊಳಗೆ ಹೋಗಲು ಸಾಧ್ಯವಾಗುತ್ತಿರಲಿಲ್ಲ. ಇದನ್ನು ಮನಗಂಡ ಟ್ರಾಫಿಕ್ ಎಎಸ್ ಐ ವಿಜಯ ಕುಮಾರ್, ಎ.ಎಸ್.ಐ.ದೇವಪ್ಪ, ಹಾಗೂ ಕೆ.ಎಸ್.ಆರ್.ಪಿ.ತಂಡ ಪ್ರತಿ ವಾರಕ್ಕೊಮ್ಮೆ ಕ್ಲೀನಿಂಗ್ ಮಾಡುತ್ತಿದ್ದಾರೆ. ಪೊಲೀಸರ ಈ ಕಾರ್ಯಕ್ಕೆ ಸಾರ್ವಜನಿಕ ವಲಯದಲ್ಲಿ ಪ್ರಶಂಸೆ ವ್ಯಕ್ತವಾಗಿದೆ.
Kshetra Samachara
20/08/2022 02:25 pm