ಮಂಗಳೂರು: ದ.ಕ. ಜಿಲ್ಲೆಯಲ್ಲಿ ಉದ್ವಿಗ್ನ ಪರಿಸ್ಥಿತಿಯ ವಾತಾವರಣ ಸೃಷ್ಟಿಯಾಗಿರುವ ಹಿನ್ನೆಲೆಯಲ್ಲಿ ದ.ಕ. ಜಿಲ್ಲಾಧಿಕಾರಿ ಕಚೇರಿಯಲ್ಲಿ ಜಿಲ್ಲಾಧಿಕಾರಿಯವರ ಅಧ್ಯಕ್ಷತೆಯಲ್ಲಿ ಇದೀಗ ಶಾಂತಿ ಸಭೆ ಆರಂಭವಾಗಿದೆ.
ಕಳೆದೊಂದು ವಾರದಲ್ಲಿ ಜಿಲ್ಲೆಯಲ್ಲಿ ಸರಣಿ ಹತ್ಯೆಗಳಿಂದ ಉದ್ವಿಗ್ನ ಸ್ಥಿತಿ ನಿರ್ಮಾಣವಾಗಿದೆ. ಈ ಹಿನ್ನೆಲೆಯಲ್ಲಿ ದ.ಕ. ಜಿಲ್ಲಾಡಳಿತ ಇಂದು ಜಿಲ್ಲೆಯ ಪ್ರಮುಖ ಸಂಘಟನೆಗಳ, ಪೊಲೀಸ್ ಅಧಿಕಾರಿಗಳ, ವಿವಿಧ ಧರ್ಮಗಳ, ಸಮುದಾಯಗಳ ಮುಖಂಡರ ನೇತೃತ್ವದಲ್ಲಿ ಜಿಲ್ಲೆಯಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಶಾಂತಿಸಭೆ ಕರೆದಿತ್ತು.
ಆದರೆ, ಇಂದಿನ ಸಭೆಯಲ್ಲಿ ಹಿಂದೂ ಸಂಘಟನೆಗಳ ಹಾಗೂ ಮುಸ್ಲಿಂ ಸಂಘಟನೆಗಳ ಪ್ರಮುಖರು ದೂರವೇ ಉಳಿದಿದ್ದಾರೆ. ಅಲ್ಲದೆ, ದ.ಕ. ಜಿಲ್ಲಾ ಉಸ್ತುವಾರಿ ಸಚಿವರು ಸೇರಿದಂತೆ ದ.ಕ. ಜಿಲ್ಲಾ ಸಂಸದರು, ಶಾಸಕರು ಸಭೆಗೆ ಗೈರು ಆಗಿದ್ದಾರೆ.
ಈ ಸಭೆಯಲ್ಲಿ ಎಡಿಜಿಪಿ ಅಲೋಕ್ ಕುಮಾರ್, ಪೊಲೀಸ್ ಕಮಿಷನರ್ ಶಶಿಕುಮಾರ್ ಎನ್., ಇಬ್ಬರು ಡಿಸಿಪಿಗಳು, ಮನಪಾ ಆಯುಕ್ತ ಅಕ್ಷಯ್ ಶ್ರೀಧರ್, ಕಾಂಗ್ರೆಸ್ ಮುಖಂಡರಾದ ಜೆ.ಆರ್.ಲೋಬೊ, ಮಿಥುನ್ ರೈ ಸೇರಿದಂತೆ ಕಾಂಗ್ರೆಸ್ ಪ್ರಮುಖರು, ಜೆಡಿಎಸ್ ಜಿಲ್ಲಾ ಯುವ ಅಧ್ಯಕ್ಷ ಅಕ್ಷಿತ್ ಸುವರ್ಣ ಸೇರಿದಂತೆ ಸರಕಾರಿ ಮಟ್ಟದ ಅಧಿಕಾರಿಗಳು, ಪೊಲೀಸ್ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದಾರೆ.
PublicNext
30/07/2022 01:33 pm