ಉಡುಪಿ: ಜಿಲ್ಲೆಯಲ್ಲಿ ಕೊರೋನಾ ಪಾಸಿಟಿವಿಟಿ ದರ ಶೇ. 1ಕ್ಕಿಂತ ಕಡಿಮೆಗೊಳಿಸುವ ನಿಟ್ಟಿನಲ್ಲಿ ಜಿಲ್ಲಾಡಳಿತ ಈ ಹಿಂದೆ ವಿಧಿಸಿದ್ದ ರಾತ್ರಿ 10ರಿಂದ ಬೆಳಗ್ಗೆ 5ರ ವರೆಗಿನ ರಾತ್ರಿ ಕರ್ಪ್ಯೂವನ್ನು ಅ. 25ರ ವರೆಗೆ ವಿಸ್ತರಿಸಿ ಜಿಲ್ಲಾಧಿಕಾರಿ ಕೂರ್ಮಾ ರಾವ್ ಆದೇಶ ಹೊರಡಿಸಿದ್ದಾರೆ.
ಹೊಸ ಆದೇಶ ಈ ಕೆಳಗಿನಂತಿದೆ.
ಜಿಲ್ಲೆಯಾದ್ಯಂತ ರಾತ್ರಿ 10 ಗಂಟೆಯಿಂದ ಬೆಳಿಗ್ಗೆ 5.ಗಂಟೆಯ ವರೆಗೆ ಅನುಬಂಧ- A ರಲ್ಲಿನ ಮಾರ್ಗಸೂಚಿಗಳಂತೆ ಕಟ್ಟುನಿಟ್ಟಿನ ರಾತ್ರಿ ಕರ್ಪ್ಯೂ ಜಾರಿಯಲ್ಲಿರುತ್ತದೆ. ಪಬ್ ಗಳನ್ನು ಕೋವಿಡ್-19 ಸೂಕ್ತ ನಡವಳಿಕೆ ಹಾಗೂ ಕೋವಿಡ್-19 ಪ್ರಮಾಣಿತ ಕಾರ್ಯವಿಧಾನವನ್ನು (SOP) ಅನುಸರಿಸುವ ಷರತ್ತುಗಳೊಂದಿಗೆ ತೆರೆಯಲು ಅನುಮತಿಸಿದೆ.
ಸಿನೆಮಾ ಹಾಲ್‌ಗಳು / ಮಲ್ಟಿಪ್ಲೆಕ್ಸ್‌ಗಳು / ಚಿತ್ರಮಂದಿರಗಳು / ರಂಗಮಂದಿರಗಳು / ಸಭಾಂಗಣಗಳು ಮತ್ತು ಅಂತಹದೇ ರೀತಿಯ ಸ್ಥಳಗಳಲ್ಲಿ ಶೇ. 100 ರಷ್ಟು ಆಸನ ಸಾಮರ್ಥ್ಯದೊಂದಿಗೆ ಕೋವಿಡ್ ಸೂಕ್ತ ನಡವಳಿಕೆ ಮತ್ತು ಸಂಬಂಧಪಟ್ಟ ಇಲಾಖೆಗಳು ನೀಡುವ SOP ಗಳನ್ನು ಕಟ್ಟುನಿಟ್ಟಾಗಿ ಅನುಸರಿಸುವ ಷರತ್ತುಗಳೊಂದಿಗೆ ಕಾರ್ಯನಿರ್ವಹಿಸಲು ಅನುಮತಿಯನ್ನು ನೀಡಲಾಗಿದೆ. ಮತ್ತು ಇಂತಹ ಸ್ಥಳಗಳಿಗೆ ಪ್ರವೇಶವನ್ನು ಕನಿಷ್ಠ ಒಂದು ಬಾರಿ ಲಸಿಕೆ ಹಾಕಿಸಿಕೊಂಡ ವ್ಯಕ್ತಿಗಳಿಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ.ಗರ್ಭಿಣಿಯರು ಮತ್ತು ಪ್ರಾಯದ ವ್ಯಕ್ತಿಗಳಿಗೆ ಇಂತಹ ಸ್ಥಳಗಳಿಗೆ ಭೇಟಿ ನೀಡುವುದು ಸೂಕ್ತವಲ್ಲ ಎಂದು ಸಲಹೆ ನೀಡಿದೆ. ಸದರಿ ಸ್ಥಳಗಳ ಪ್ರವೇಶದ್ವಾರದಲ್ಲಿ ಉಷ್ಣ ತಪಾಸಣೆ (Thermal screening) ಮಾಡುವುದು. ಮೇಲೆ ತಿಳಿಸಿದ ಎಲ್ಲಾ ಸ್ಥಳಗಳಲ್ಲಿ ಮತ್ತು ವಿಶ್ರಾಂತಿ ಕೊಠಡಿಗಳು ಸೇರಿದಂತೆ ಪ್ರತಿ ಪ್ರದರ್ಶನದ ನಂತರ ಸ್ವಚ್ಛಗೊಳಿಸಿ ಸ್ಯಾನಿಟೈಸ್ ಮಾಡುವುದು. ಪ್ರವೇಶ ಮತ್ತು ಆಯಕಟ್ಟಿನ ಸ್ಥಳಗಳಲ್ಲಿ(Strategic ) ಹ್ಯಾಂಡ್ ಸ್ಯಾನಿಟೈಜರ್ ಗಳನ್ನು ಸದರಿ ಸಂಸ್ಥೆಗಳೇ ಒದಗಿಸುವುದು.
ಜಿಲ್ಲೆಯಲ್ಲಿ 6 ರಿಂದ 12 ನೇ ತರಗತಿಗಳು ವಾರದ 5 ದಿನಗಳಲ್ಲಿ ಪೂರ್ಣ ಪ್ರಮಾಣದಲ್ಲಿ ಕಾರ್ಯಚರಿಸಲು ಅನುಮತಿಸಿದೆ. ಅಂತಹ ಶಾಲೆಗಳಲ್ಲಿ ಶನಿವಾರ ಮತ್ತು ಭಾನುವಾರದಂದು ತೀವ್ರತರನಾದ ನೈರ್ಮಲ್ಯವನ್ನು ಮಾಡುವುದು. ಕೋವಿಡ್ ನಿಯಮ ಮತ್ತು ಕೋವಿಡ್-19 ಸೂಕ್ತ ನಡವಳಿಕೆಯನ್ನು ಹಾಗೂ ಸಂಬಂಧಪಟ್ಟ ಇಲಾಖೆಯವರು ಹೊರಡಿಸುವ ಕೋವಿಡ್-19 ಪ್ರಮಾಣಿತ ಕಾರ್ಯವಿಧಾನವನ್ನು (SOP) ಅನುಸರಿಸುವ ಷರತ್ತಿಗೊಳಪಟ್ಟು ಕಾರ್ಯನಿರ್ವಹಿಸುವುದು.
ಕೋವಿಡ್-19 ಸೂಕ್ತ ನಡವಳಿಕೆಯನ್ನು ಹಾಗೂ ಸಂಬಂಧಪಟ್ಟ ಇಲಾಖೆಯವರು ಹೊರಡಿಸುವ ಕೋವಿಡ್-19 ಪ್ರಮಾಣಿತ ಕಾರ್ಯವಿಧಾನವನ್ನು (SOP) ಅನುಸರಿಸುವ ಷರತ್ತುಗಳೊಂದಿಗೆ ಸ್ಪರ್ಧಾತ್ಮಕ ತರಬೇತಿಗಳಿಗೆ ಮಾತ್ರ ಈಜು ಕೊಳಗಳನ್ನು ತೆರೆಯಲು ಅನುಮತಿಸಿದೆ. ಕೋವಿಡ್-19 ಸೂಕ್ತ ಶಿಷ್ಟಾಚಾರವನ್ನು ಅನುಸರಿಸುವ ಷರತ್ತುಗಳೊಂದಿಗೆ ಕ್ರೀಡಾಪಟುಗಳ ಅಭ್ಯಾಸಕ್ಕೆ ಮಾತ್ರ ಕ್ರೀಡಾ ಸಂಕೀರ್ಣಗಳನ್ನು/ ಸ್ಟೇಡಿಯಂಗಳನ್ನು ತೆರೆಯಲು ಅನುಮತಿಸಿದೆ. ಆದರೆ ಪ್ರೇಕ್ಷಕರಿಗೆ ಅನುಮತಿ ಇರುವುದಿಲ್ಲ.
ಎಲ್ಲಾ ಸಾಮಾಜಿಕ, ರಾಜಕೀಯ, ಕ್ರೀಡೆ, ಮನರಂಜನಾ, ಶೈಕ್ಷಣಿಕ, ಸಾಂಸ್ಕೃತಿಕ, ಧಾರ್ಮಿಕ ಮತ್ತು ಇತರೆ ಸಭೆಗಳು ಹಾಗೂ ಸಮಾರಂಭಗಳು ಮತ್ತು ಸಾರ್ವಜನಿಕರು ಒಟ್ಟುಗೂಡುವುದನ್ನು ನಿರ್ಬಂಧಿಸಲಾಗಿದೆ.
Kshetra Samachara
10/10/2021 09:29 am