ಬೆಂಗಳೂರು: ನಗರದ ಜನರಿಗೆ ಕಿರಿಕಿ ಉಂಟು ಮಾಡುತ್ತಿರುವ ಸ್ಮಾರ್ಟ್ ಸಿಟಿ ಕಾಮಗಾರಿಗಳಿಗೆ ತಾತ್ಕಾಲಿಕ ಬ್ರೇಕ್ ಬೀಳಲಿದೆ.
ಹೌದು. ನಿರ್ಮಾಣ ಹಾಗೂ ನೆಲಸಮ ತ್ಯಾಜ್ಯ ನಿರ್ವಹಣೆ-2016ರ ನಿಯಮಗಳನ್ನು ಅನುಸರಿಸುವ ತನಕ ಮಂಗಳೂರಿನ ಸ್ಮಾರ್ಟ್ ಸಿಟಿ ಯೋಜನೆಗೆ ಸಂಬಂಧಿಸಿದ ಕಾಮಗಾರಿಗಳನ್ನು ಸ್ಥಗಿತಗೊಳಿಸಲಾಗುವುದು. ಈ ಸಂಬಂಧ ಆಯಾ ಗುತ್ತಿಗೆದಾರರಿಗೆ ಸೂಚಿನೆ ನೀಡಲಾಗುವುದು ಎಂದು ಮಂಗಳೂರು ಮಹಾ ನಗರ ಪಾಲಿಕೆ ಆಯುಕ್ತ ಹಾಗೂ ಮಂಗಳೂರು ಸ್ಮಾರ್ಟ್ ಸಿಟಿ ಲಿಮಿಟೆಡ್‌ನ ವ್ಯವಸ್ಥಾಪಕ ನಿರ್ದೇಶಕ ಅಕ್ಷಯ್ ಶ್ರೀಧರ್ ಹೈಕೋರ್ಟ್‌ಗೆ ತಿಳಿಸಿದ್ದಾರೆ.
ಪಚ್ಚನಾಡಿ, ಮಂದಾರದಲ್ಲಿ ಘನತ್ಯಾಜ್ಯ ಭೂಭರ್ತಿ ಘಟಕದಿಂದ ಉಂಟಾದ ಅನಾಹುತಗಳ ಬಗ್ಗೆ ಕರ್ನಾಟಕ ಕಾನೂನು ಸೇವಾ ಪ್ರಾಧಿಕಾರವು ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದೆ. ಈ ಅರ್ಜಿಯನ್ನು ಮುಖ್ಯ ನ್ಯಾ.ಎ.ಎಸ್.ಓಕಾ ಹಾಗೂ ನ್ಯಾ.ಎಸ್.ವಿಶ್ವಜಿತ್ ಶೆಟ್ಟಿ ಅವರಿದ್ದ ವಿಭಾಗೀಯ ನ್ಯಾಯಪೀಠವು ವಿಚಾರಣೆ ನಡೆಸಿತು. ಈ ಸಂದರ್ಭದಲ್ಲಿ ಪಾಲಿಕೆ ಆಯುಕ್ತ ಅಕ್ಷಯ್ ಶ್ರೀಧರ್ ಅವರು ವಿಡಿಯೋ ಕಾನ್ಫರೆನ್ಸ್ ಮೂಲಕ ಹಾಜರಾಗಿದ್ದರು.
ನ್ಯಾಯಪೀಠವು ಅಕ್ಷಯ್ ಶ್ರೀಧರ್ ಅವರನ್ನು ಪ್ರಶ್ನೆ -ಉತ್ತರ ವಿಧಾನದಲ್ಲಿ ವಿಚಾರಣೆ ನಡೆಸಿದ್ದು, ಸ್ಮಾರ್ಟ್ ಸಿಟಿ ಕಾಮಗಾರಿಗಳ ಅನುಷ್ಠಾನದಲ್ಲಿ ನಿಯಮ ಪಾಲಿಸಲಾಗುತ್ತಿದೆಯೇ? ನಿಯಮಗಳನ್ನು ಪಾಲಿಸಲಾಗುತ್ತಿಲ್ಲ ಎಂದಾದರೆ ನಿಯಮಗಳನ್ನು ಪಾಲಿಸುವ ತನಕ ಕಾಮಗಾರಿಗಳನ್ನು ಸ್ಥಗಿತಗೊಳಿಸುತ್ತೀರಾ ಎಂದು ಪ್ರಶ್ನಿಸಿದೆ.
ಇದಕ್ಕೆ ಉತ್ತರಿಸಿದ ಆಯುಕ್ತರು, ನಿಯಮಗಳನ್ನು ಪಾಲಿಸುತ್ತಿಲ್ಲ. 2016ರ ನಿಯಮಗಳನ್ನು ಅನುಸರಿಸುವ ತನಕ ಕಾಮಗಾರಿಗಳನ್ನು ಸ್ಥಗಿತಗೊಳಿಸುವಂತೆ ಗುತ್ತಿಗೆದಾರರಿಗೆ ಸೂಚನೆ ನೀಡಲಾಗುವುದು" ಎಂದು ನ್ಯಾಯಪೀಠಕ್ಕೆ ತಿಳಿಸಿದ್ದಾರೆ.
Kshetra Samachara
24/12/2020 01:15 pm