ಮೂಲ್ಕಿ: ಮೂಲ್ಕಿ- ಕಿನ್ನಿಗೋಳಿ ರಾಜ್ಯ ಹೆದ್ದಾರಿ ಕೆಂಚನಕೆರೆ ತಿರುವಿನಲ್ಲಿ ಅಪಾಯಕಾರಿ ಕಟ್ಟಡವೊಂದು ಕಳೆದ ಕೆಲ ವರ್ಷಗಳಿಂದ ಪಾಳು ಬಿದ್ದಿದ್ದು ಅಪಾಯಕ್ಕೀಡುಮಾಡಿದೆ.
ಮೂಲ್ಕಿಯಿಂದ ಕಿನ್ನಿಗೋಳಿ ಕಡೆಗೆ ಹೋಗುವ ರಾಜ್ಯ ಹೆದ್ದಾರಿಗೆ ತಾಗಿಕೊಂಡೇ ಅಪಾಯಕಾರಿ ಕಟ್ಟಡವಿದ್ದು ಈಗಲೋ ಆಗಲೋ ಎನ್ನುವಂತಿದೆ. ಕಟ್ಟಡ ತೆರವುಗೊಳಿಸಲು ಕಿಲ್ಪಾಡಿ ಗ್ರಾಮ ಪಂಚಾಯಿತಿ ಪಿಡಿಒ ಕಳೆದ ಒಂದು ವರ್ಷದ ಹಿಂದೆ ಅಂಗಡಿ ಮಾಲೀಕ ಕುಬೆವೂರು ಉದ್ಯಮಿಯೋರ್ವರಿಗೆ ನೋಟಿಸ್ ನೀಡಿದ್ದರೂ ಇದುವರೆಗೂ ಕಟ್ಟಡ ತೆರವು ಗೊಂಡಿಲ್ಲ ಎಂದು ಸಾರ್ವಜನಿಕರು ಆರೋಪಿಸುತ್ತಿದ್ದಾರೆ.
ಹಳೆಕಾಲದ ಕಟ್ಟಡದ ಸಮೀಪವೇ ಬೆಳಗ್ಗೆ, ಸಂಜೆ ಹೊತ್ತು ಮೀನು ಮಾರಾಟ ನಡೆಯುತ್ತಿದ್ದು ಭಾರಿ ಜನಸಂದಣಿ ಸೇರುತ್ತದೆ.
ಅಲ್ಲದೆ, ಮೂಲ್ಕಿ ಕಿನ್ನಿಗೋಳಿ ಮೂಡಬಿದ್ರೆ ಕಟೀಲು ರಾಜ್ಯಹೆದ್ದಾರಿ ಇದಾಗಿದ್ದು ಅಪಾಯಕಾರಿ ತಿರುವಿನಲ್ಲಿ ಭಾರೀ ಸಂಖ್ಯೆಯ ವಾಹನಗಳು ಓಡಾಟ ನಡೆಸುತ್ತಿದ್ದು ಅವಘಡ ಸಂಭವಿಸುವ ಮೊದಲೇ ಹಳೆ ಕಾಲದ ಮುರುಕಲು ಕಟ್ಟಡ ತೆರವುಗೊಳಿಸಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.
ಈ ಬಗ್ಗೆ ಕಿಲ್ಪಾಡಿ ಪಂ. ಪಿಡಿಒ ಹರಿಶ್ಚಂದ್ರ ಮಾತನಾಡಿ, ಕಳೆದ ಒಂದು ವರ್ಷದ ಹಿಂದೆಯೇ ಕಟ್ಟಡ ತೆರವುಗೊಳಿಸಬೇಕೆಂದು ಮಾಲೀಕರಿಗೆ ಪಂಚಾಯಿತಿಯಿಂ ನೋಟಿಸ್ ನೀಡಲಾಗಿದೆ.
ಈ ಬಗ್ಗೆ ಕೂಡಲೇ ಪರಿಶೀಲಿಸಿ ಅಪಾಯ ಸಂಭವಿಸುವ ಮೊದಲೇ ತೆರವುಗೊಳಿಸಲು ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.
Kshetra Samachara
28/09/2020 07:07 pm