ಉಡುಪಿ: ಮಲ್ಪೆ- ತೀರ್ಥಹಳ್ಳಿ ರಾಷ್ಟ್ರೀಯ ಹೆದ್ದಾರಿ 169(ಎ) ಚತುಷ್ಪಥ ರಸ್ತೆ ಇದು. ಉಡುಪಿಯಿಂದ ಮಣಿಪಾಲದ ತನಕ ಕ್ರಮಿಸಲು ಪರದಾಡಬೇಕಾದ ಪರಿಸ್ಥಿತಿ ನಿರ್ಮಾಣಗೊಂಡಿದೆ. ಸತತ ಸುರಿಯುತ್ತಿರುವ ಮಳೆಯಿಂದಾಗಿ ಇಂದ್ರಾಳಿ ಜಂಕ್ಷನ್ ನಲ್ಲಿ ಟ್ರಾಫಿಕ್ ಜಾಮ್ ಮಾಮೂಲು ಎಂಬಂತಾಗಿದೆ.
ನಿನ್ನೆ ಬೆಳಿಗ್ಗಿನಿಂದ ಗಂಟೆಗೊಮ್ಮೆ ಜಡಿಮಳೆಯಾಗುತ್ತಿದ್ದು, ಇಂದ್ರಾಳಿ ಜಂಕ್ಷನ್ ಸಂಪೂರ್ಣ ಕೆಸರುಮಯವಾಗಿದ್ದು, ಕಂಬಳ ಗದ್ದೆಯಾಗಿ ಮಾರ್ಪಾಡಾಗಿದೆ. ಇಲ್ಲಿಂದ ಸಂಚರಿಸುವ ವಾಹನ ಸವಾರರು ಹಿಡಿಶಾಪ ಹಾಕಿಯೇ ಮುಂದೆ ಸಾಗುತ್ತಿದ್ದಾರೆ. ಚತುಷ್ಫಥ ರಸ್ತೆಯಲ್ಲಿ ಬಿದ್ದಿರುವ ಗುಂಡಿಗಳು ಬೃಹದಾಕಾರವಾಗಿದ್ದು, ಕೆಸರು ನೀರಿನಿಂದ ಆವೃತವಾಗಿವೆ.
ದ್ವಿಚಕ್ರ ವಾಹನ ಸವಾರರ ಪಾಡಂತೂ ಹೇಳತೀರದು. ವಯಸ್ಕರು ಈ ಹೊಂಡದ ರಸ್ತೆಯಲ್ಲಿ ಸಂಚರಿಸಿದರೆ ಎರಡು ದಿನ ಹಾಸಿಗೆ ಹಿಡಿಯಬೇಕಾದ ಪರಿಸ್ಥಿತಿ ಇದೆ. ಇವತ್ತಿನ ಮಳೆಗೆ ದ್ವಿಚಕ್ರ ವಾಹನ ಅರ್ಧದಷ್ಟು ಮುಳುಗುವ ಪರಿಸ್ಥಿತಿ ನಿರ್ಮಾಣವಾಗಿದೆ. ಮಳೆಗಾಲದ ನಂತರ ರಸ್ತೆ ರಿಪೇರಿ ಮಾಡುತ್ತೇವೆ ಎಂದು ಜನಪ್ರತಿನಿಧಿಗಳು ಹೇಳುತ್ತಲೇ ಇದ್ದಾರೆ. ಅಲ್ಲಿಯ ತನಕ ತೆರಿಗೆ ಕಟ್ಟಿಯೂ ಈ ಶಿಕ್ಷೆ ಅನುಭವಿಸಬೇಕೇ ಎಂಬುದು ಸವಾರರ ಪ್ರಶ್ನೆಯಾಗಿದೆ.
Kshetra Samachara
11/09/2022 10:02 am