ವಿಶೇಷ ವರದಿ: ಜಯಶೇಖರ್ ಮಡಪ್ಪಾಡಿ, ಪಬ್ಲಿಕ್ ನೆಕ್ಸ್ಟ್ ಕುಂದಾಪುರ
ಬೈಂದೂರು: ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ 2ನೇ ತರಗತಿ ವಿದ್ಯಾರ್ಥಿನಿ ಸನ್ನಿಧಿ ಆ. 8ರಂದು ಮರದ ಕಾಲುಸಂಕದಿಂದ ಬಿದ್ದು ಸಾವನ್ನಪ್ಪಿದ ದುರ್ಘಟನೆಗೆ ಕಾರಣವೇನು ಎಂದು ಹುಡುಕುತ್ತಾ ಹೊರಟ ಪಬ್ಲಿಕ್ ನೆಕ್ಸ್ಟ್ ತಂಡಕ್ಕೆ ಸಿಕ್ಕಿದ ಮಾಹಿತಿಯಿದು...
ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನ ಕಾಲ್ತೋಡು ಕಾಡುಗಳಿಂದ ಕೂಡಿದ ಊರು. ಕೃಷಿಯೇ ಇಲ್ಲಿನ ಜೀವನಾಧಾರ.
ಗ್ರಾಮದ ಒಂದು ಮತ್ತು 2ನೇ ವಾರ್ಡಿನಲ್ಲಿ 500 ಕುಟುಂಬಗಳಿವೆ. ಆದರೆ, ಇಲ್ಲಿ ಸೂಕ್ತ ರಸ್ತೆಯಿಲ್ಲ, ಸೇತುವೆಯಿಲ್ಲ. ಅಪಾಯಕಾರಿ ಸ್ಥಿತಿಯಲ್ಲಿ ಸರಂಜಾಮು ಹೊತ್ತೊಯ್ಯಬೇಕು. ಏನೇ ಕಟ್ಟಬೇಕಿದ್ದರೂ ಲೋಡುಗಟ್ಟಲೆ ಕಲ್ಲು, ಸಿಮೆಂಟು ಇತ್ಯಾದಿ ತಲೆ ಮೇಲೆ ಹೊರಬೇಕು.
ಆಡಳಿತ ವರ್ಗದ ನಿರ್ಲಕ್ಷ್ಯ ಒಂದು ಕಡೆಯಾದರೆ, ರಾಜಕೀಯ ಕೆಸರೆರಚಾಟ ಇನ್ನೊಂದು ಕಡೆ. ಹೈರಾಣವಾಗುತ್ತಿರುವುದು ಮಾತ್ರ ಸಾಮಾನ್ಯ ಜನತೆ.
ಸನ್ನಿಧಿಯಂತಹ ಸುಮಾರು 20 ಮಕ್ಕಳು ಇಲ್ಲಿನ ಕಾಲುಸಂಕವನ್ನು ದಾಟಿಕೊಂಡು ಗದ್ದೆಯಂಚಿನ ದಾರಿಯಲ್ಲಿ ನಡೆದು ಸಾಗಬೇಕು.
ಚಪ್ಪರಿಕೆ, ಬೀಜಮಕ್ಕಿ, ನಾರ್ನಡಿ, ವಾಟೆಮನೆ ಹೀಗೆ ಹಲವು ಊರ ಜನರ ಪ್ರಕಾರ ಇಲ್ಲಿನ 17 ಕಾಲುಸಂಕಗಳಿಗೆ ಒಂದೇ ಒಂದು ಪರಿಹಾರವಿದೆ. ಅದು ನಾರ್ನಡಿ ಎಂಬಲ್ಲಿ ಹೊಳೆಗೆ ಸೇತುವೆ ನಿರ್ಮಿಸುವುದು.
ಪಬ್ಲಿಕ್ ನೆಕ್ಸ್ಟ್ ಭೇಟಿ ನೀಡಿದ್ದಾಗ, ಗ್ರಾಮದ ಹಿರಿಯರ ಜೊತೆ ಮಾತುಕತೆ ಮೂಲಕ ಜಾಗ ಬಿಟ್ಟು ಕೊಡಲು ಜಾಗದ ಮಾಲೀಕರು ಅನುಮತಿ ನೀಡಿದ್ದಾರೆ.
ಈಗ ಜಾಗದ ಸಮಸ್ಯೆ ಬಗೆಹರಿದಿದೆ. ಅನುದಾನ, ಸೇತುವೆ ನಿರ್ಮಾಣ ಎರಡೇ ಉಳಿದಿರುವುದು. ಸೇತುವೆ ನಿರ್ಮಾಣವಾದರೆ 70 ವರ್ಷಗಳ ಸಂಪರ್ಕ ಸೇತುವೆ ಕನಸು ನನಸಾಗಲಿದೆ. ಇನ್ನು ರಸ್ತೆ ಅಭಿವೃದ್ಧಿ, ಜನಪ್ರತಿನಿಧಿಗಳ ಇಚ್ಛಾಶಕ್ತಿಯ ಮೂಲಕವೇ ಅಗಬೇಕಿದೆ. ಹಲವು ಬಾರಿ ಮಾಡಿಕೊಳ್ಳಲಾದ ಮನವಿಗಳು ಕಸದ ಬುಟ್ಟಿಯಿಂದ ಮೇಲೆದ್ದು ಬರಬೇಕಿದೆ.
ಚಪ್ಪರಿಕೆ ಶಾಲೆ ಪಕ್ಕದಲ್ಲಿಯೇ ಅಪಾಯಕಾರಿ ವಿದ್ಯುತ್ ಟ್ರಾನ್ಸ್ ಫಾರ್ಮರ್ ಇದ್ದು, ಸುರಕ್ಷಿತ ಸ್ಥಳಕ್ಕೆ ವರ್ಗಾಯಿಸಬೇಕು ಅಥವಾ ತಂತಿ ಬೇಲಿ ನಿರ್ಮಿಸುವಂತೆ ಗ್ರಾಮಸ್ಥರು ಆಗ್ರಹಿಸಿದ್ದಾರೆ.
ಈ ಪ್ರದೇಶದಲ್ಲಿ ಪಡಿತರ ವಿತರಣೆ ಕೇಂದ್ರ ತೆರೆಯಲು ಎಲ್ಲಾ ಅರ್ಹತೆಗಳಿದ್ದರೂ ಸಂಬಂಧಪಟ್ಟವರು ಈ ಬಗ್ಗೆ ತಲೆ ಕೆಡಿಸಿಕೊಂಡಿಲ್ಲದಿರುವುದು ಸ್ಥಳೀಯರ ದೌರ್ಭಾಗ್ಯವೇ ಸರಿ.
ನಮ್ಮ ತಾಳ್ಮೆ ನಮ್ಮ ದೌರ್ಬಲ್ಯವಲ್ಲ. ಹೋರಾಟದಿಂದಲೇ ಶಕ್ತಿ ಪ್ರದರ್ಶನ ಮಾಡಿ ಸೌಲಭ್ಯ ಪಡೆಯಬೇಕಾದ ಪರಿಸ್ಥಿತಿ ಬಂದರೆ ಅದಕ್ಕೂ ಸಿದ್ಧ ಎನ್ನುತ್ತಾರೆ ಗ್ರಾಮಸ್ಥೆ ಜ್ಯೋತಿ. ಅಭಿವೃದ್ಧಿಯಾಗದೆ ಇದ್ದರೆ ಚುನಾವಣೆ ಬಹಿಷ್ಕಾರಕ್ಕೂ ತಯಾರು ಎಂದರು ಇಲ್ಲಿನ ಸಂಘಟಿತ ಗ್ರಾಮಸ್ಥರು.
PublicNext
17/08/2022 02:23 pm