ಕಾಪು: ಪಡುಬಿದ್ರಿಯ ಕಲ್ಲಟ್ಟೆ ಬಳಿ ನಿರ್ಮಾಣ ಹಂತದಲ್ಲಿರುವ ಅಣೆಕಟ್ಟು ಹಾಗೂ ಸೇತುವೆ ಕಾಮಗಾರಿ ವೇಳೆ ಗುತ್ತಿಗೆದಾರ ನಿರ್ಲಕ್ಷ್ಯ ತೋರಿದ್ದರ ಪರಿಣಾಮ ಕೃಷಿ ಭೂಮಿ ಸಹಿತ ಸುತ್ತಮುತ್ತಲಿನ ಮನೆಗಳಿಗೆ ಕೃತಕ ನೆರೆ ಭೀತಿ ಎದುರಾದ ಬಗ್ಗೆ ಸ್ಥಳೀಯರು ಆತಂಕ ವ್ಯಕ್ತ ಪಡಿಸಿದ್ದಾರೆ.
ಈ ಬಗ್ಗೆ ಸ್ಥಳೀಯ ನಿವಾಸಿ ಶಂಕರ ಪೂಜಾರಿ ಮಾತನಾಡಿ, ಸೇತುವೆ ನಿರ್ಮಾಣ ಸಂದರ್ಭ ಪಿಲ್ಲರ್ ನಿರ್ಮಾಣಕ್ಕೆ ಅಡ್ಡಿಯಾಗದಂತೆ ಕಾಮಿನಿ ಹೊಳೆ ನೀರಿಗೆ ದಂಡೆ ಕಟ್ಟಿ ನೀರನ್ನು ತಡೆದಿದ್ದರು. ಇದೀಗ ಆಮೆಗತಿಯಲ್ಲಿ ಸಾಗಿದ ಕಾಮಗಾರಿ ಈ ಬಾರಿ ಮುಗಿಯುವಂತೆ ಕಾಣುತ್ತಿಲ್ಲ. ಮಳೆನೀರು ಸರಾಗವಾಗಿ ಹರಿದು ಹೋಗಲು ಹೊಳೆಗೆ ಕಟ್ಟಿದ ದಂಡೆಯನ್ನು ಸಂಪೂರ್ಣ ತೆರವು ಮಾಡಬೇಕಾದ ಗುತ್ತಿಗೆದಾರ ಅರೆಬರೆಯಾಗಿ ತೆರವುಗೊಳಿಸಿದ್ದರಿಂದ ಸಣ್ಣ ಪ್ರಮಾಣದಲ್ಲಿ ಬಂದ ಮಳೆನೀರೇ ಹರಿದು ಹೋಗುತ್ತಿಲ್ಲ.
ಇದೀಗ ಮತ್ತೆ ಎಡೆಬಿಡದೆ ಮಳೆ ಸುರಿಯಲಾರಂಭಿಸಿದರೆ ದೇವರೇ ಗತಿ. ಕೃಷಿ ಭೂಮಿ ಸಹಿತ ಎಲ್ಲ ಮನೆ ಮಂದಿ ನೆರೆ ಭೀತಿ ಎದುರಿಸುವಂತಾಗಬಹುದು. ಈ ಬಗ್ಗೆ ಗುತ್ತಿಗೆದಾರರ ಗಮನಕ್ಕೆ ತಂದರೂ ಕ್ರಮ ಕೈಗೊಂಡಿಲ್ಲ. ಆಡಳಿತವೇ ಸೂಕ್ತ ಕ್ರಮ ಕೈಗೊಳ್ಳುವ ಮೂಲಕ ಮುಂದೆ ಸಂಭವಿಸಬಹುದಾದ ಅನಾಹುತ ತಪ್ಪಿಸುವಂತೆ ಆಗ್ರಹಿಸಿದ್ದಾರೆ.
Kshetra Samachara
21/06/2022 08:12 pm