ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮೂಡುಬಿದಿರೆ: ಕಾನದಲ್ಲಿ ವಿದ್ಯುತ್ ಸಬ್‌ ಸ್ಟೇಷನ್ ನಿರ್ಮಾಣ ವಿರೋಧಿಸಿ ಪ್ರತಿಭಟನೆ

ಮೂಡುಬಿದಿರೆ: ಬೆಳುವಾಯಿ ಗ್ರಾ.ಪಂ ವ್ಯಾಪ್ತಿಯ ಕಾನದಲ್ಲಿ ವಿದ್ಯುತ್ ಸಬ್ ಸ್ಟೇಷನ್ ನಿರ್ಮಿಸಲು ಉದ್ದೇಶಿಸಲಾಗಿದೆ. ಈ ನಿರ್ಮಾಣ ಕಾರ್ಯವನ್ನು ವಿರೋಧಿಸಿ ಸ್ಥಳೀಯರು ಪ್ರತಿಭಟನೆ ನಡೆಸಿದ್ದಾರೆ.

ಮಾರ್ಪಾಡಿ ಗ್ರಾಮದ ಸ.ನಂ318/1, 325/1ರಲ್ಲಿ 5 ಎಕರೆ ಪ್ರದೇಶದಲ್ಲಿ ವಿದ್ಯುತ್ ಸಬ್ ಸ್ಟೇಷನ್ ನಿರ್ಮಾಣಕ್ಕೆ ಮಂಜೂರಾತಿ ದೊರಕಿರುತ್ತದೆ. ಈ ಪ್ರದೇಶದಲ್ಲಿ ಸುಮಾರು 60 ಮನೆಗಳಿದ್ದು ಶೇ 95 ಜನರು ಸಾಮಾನ್ಯ ಕೃಷಿಕರು. ತಮ್ಮ ಜೀವನೋಪಾಯಕ್ಕಾಗಿ ತೆಂಗು, ಅಡಕೆ, ಮಾವು, ಗೇರು ರಬ್ಬರ್ ಮತ್ತಿತರ ಬೆಳೆಗಳನ್ನು ಬೆಳೆಸಿ ಜೀವನ ನಡೆಸುತ್ತಿದ್ದಾರೆ. ಹಾಗೂ ಈ ಪ್ರದೇಶದಲ್ಲಿ ಎಸ್‌ಸಿ/ಎಸ್‌ಟಿ ಕಾಲನಿಯೂ ಇದೆ. ಇದೀಗ ಸ್ಥಾಪಿಸಲ್ಪಡುವ ಸಬ್ ಸ್ಟೇಷನ್‌ಗೆ ಸಮೀಪ 500 ಮೀಟರ್ ಅಂತರದಲ್ಲಿ ಪುತ್ತಿಗೆ ಗ್ರಾಮದಲ್ಲಿ ಒಂದು ವಿದ್ಯುತ್ 220/11 ಕೆ.ವಿ ಉಪ ಸಬ್‌ ಸ್ಟೇಷನ್ ಇದ್ದು ಈಗಾಗಲೇ ಒಂದು ವಿದ್ಯುತ್ ಪ್ರಸರಣ ಮಾರ್ಗವು ಪುತ್ತಿಗೆ ಹಾಗೂ ಬೆಳುವಾಯಿ ಗ್ರಾಮದಲ್ಲಿ ಹಾದು ಹೋಗಿರುತ್ತದೆ. ಇದೀಗ ವಿದ್ಯುತ್ ಪ್ರಸರಣ ಹಾದಿಯ ಹೋಗುವ ಸ್ಥಳದಲ್ಲಿ ಶಾಲೆ, ದೇವಸ್ಥಾನ, ಪ್ರಾರ್ಥನ ಮಂದಿರಗಳಿದ್ದು ಈ ಪ್ರದೇಶದಲ್ಲಿ ಹೈಟೆನ್ಶನ್ ವಿದ್ಯುತ್ ತಂತಿಯನ್ನು ಹೊಸದಾಗಿ ಎಳೆದರೆ ಕೃಷಿಗೆ ಹಾಗೂ ಜನರ ಜೀವನಕ್ಕೆ ಅಪಾಯವಾಗುವ ಸಾಧ್ಯತೆಯಿದೆ ಆದ್ದರಿಂದ ಗ್ರಾಮದ ಜನರಿಗೆ ತೊಂದರೆ ಆಗದಂತೆ ಈ ವಿದ್ಯುತ್ ಸಬ್ ಸ್ಟೇಷನ್‌ಅನ್ನು ಬೇರೆ ಕಡೆಗೆ ಸ್ಥಳಾಂತರಿಸಬೇಕೆಂದು ಗ್ರಾಮಸ್ಥರು ಅಧಿಕಾರಿಗಳಿಗೆ ಮನವಿ ಮಾಡಿದರು.

ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಗ್ರಾಮಸ್ಥ ರಾಜೇಶ್ ಕಡಲಕೆರೆ ಮಾತನಾಡಿ ಸಬ್‍ಸ್ಟೇಷನ್‌ನಿಂದ ಹಾದು ಹೋಗುವ ಪ್ರದೇಶದಲ್ಲಿ ಎಸ್‌ಸಿ/ಎಸ್‌ಟಿ ಕುಟುಂಬಗಳ ಮನೆಗಳಿವೆ. ಮತ್ತು ಕೃಷಿ ಭೂಮಿ ಇದೆ. ಆದ್ದರಿಂದ ಇಲ್ಲಿ ಆಗುವ ವಿದ್ಯುತ್ ಸಬ್‍ಸ್ಟೇಷನ್‌ಗೆ ಗ್ರಾಮಸ್ಥರ ವಿರೋಧವಿದೆ. ಆದರೆ ಅಭಿವೃದ್ಧಿಗೆ ವಿರೋಧವಿಲ್ಲ. ಆದ್ದರಿಂದ ಗುರುತಿಸಿರುವ ಸ್ಥಳವನ್ನು ಮತ್ತೊಮ್ಮೆ ಪರಿಶೀಲನೆ ನಡೆಸಬೇಕು. ಇಲ್ಲೇ ಪರಿಸರದಲ್ಲಿ 30 ವರ್ಷಗಳ ಹಿಂದೆ ನಿರ್ಮಾಣವಾಗಿರುವ ಸಬ್‍ಸ್ಟೇಷನ್ ಇದೆ. ಅಲ್ಲದೆ ಇದೀಗ ನಿರ್ಮಾಣವಾಗಲಿರುವ ಸಬ್‍ಸ್ಟೇಷನ್‍ನ ಉಪಯೋಗ ಸ್ಥಳೀಯರಿಗಿಲ್ಲ ಬದಲಾಗಿ ಶಿರ್ತಾಡಿ, ಅಳಿಯೂರು ಹಾಗೂ ವಾಲ್ಪಾಡಿ ಪ್ರದೇಶದ ಜನರಿಗೆ ಹೆಚ್ಚಿನ ಉಪಯೋಗವಾಗುವುದರಿಂದ ಅಲ್ಲಿನ ಪ್ರದೇಶದಲ್ಲಿಯೇ ನಿರ್ಮಿಸುವುದು ಉತ್ತಮವೆಂದು ಹೇಳಿದ ಅವರು ಈ ಯೋಜನೆಗೆ ಇಲ್ಲಿಂದ ವಿದ್ಯುತ್ ಹಾದು ಹೋಗುವುದಕ್ಕೆ ನಮ್ಮ ವಿರೋಧವಿದೆ ಇದೀಗ ಸಾರ್ವಜನಿಕರು ವಿರೋಧಿಸುತ್ತಿದ್ದೇವೆ ಮುಂದೆ ಕಾನೂನಾತ್ಮಕವಾದ ಹೋರಾಟವನ್ನು ಕೈಗೊಳ್ಳುವುದಾಗಿ ಅವರು ಎಚ್ಚರಿಸಿದರು. ಸಬ್ ಸ್ಟೇಷನ್ ನಿರ್ಮಿಸಲು ಜಾಗ ಮಂಜೂರಾಗಿದ್ದು ಇಲಾಖೆಗೆ ಹಣವನ್ನು ಪಾವತಿ ಮಾಡಲಾಗಿರುವುದರಿಂದ ಬೇರೆಡೆಗೆ ಬದಲಾವಣೆ ಮಾಡುವುದು ಕಷ್ಟ ಸಾಧ್ಯ. ನಿಮ್ಮ ಏನು ಮನವಿ ಇದೆಯೋ ಅದನ್ನು ಕೊಡಿ ಎಂದು ಕೆಪಿಟಿಸಿಎಲ್‍ನ ಕಾರ್ಯನಿರ್ವಾಹಣಾಧಿಕಾರಿ ಗಂಗಾಧರ್ ಕೆ.ತಿಳಿಸಿದರು.

ಗ್ರಾಮ ಪಂಚಾಯತ್ ಸದಸ್ಯ ಭರತ್ ಶೆಟ್ಟಿ, ಮಾಜಿ ಸದಸ್ಯ ಅನೀಶ್ ಡಿ"ಸೋಜಾ, ಅಬುಲ್ ಅಲಾ ಪುತ್ತಿಗೆ, ಪ್ರಗತಿಪರ ಕೃಷಿಕ ಉಮಾನಾಥ ದೇವಾಡಿಗ, ಪ್ರಭಾಕರ ಕುಲಾಲ್, ಪಾರೂಕ್, ಕೃಷ್ಣಪ್ಪ ಪೂಜಾರಿ, ಪ್ರವೀಣ್ ಕಾನ ಸಹಿತ 200ಕ್ಕೂ ಅಧಿಕ ಮಂದಿ ಗ್ರಾಮಸ್ಥರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

Edited By : Manjunath H D
Kshetra Samachara

Kshetra Samachara

01/06/2022 12:50 pm

Cinque Terre

3.59 K

Cinque Terre

0

ಸಂಬಂಧಿತ ಸುದ್ದಿ