ಉಡುಪಿ: ಹಲವಾರು ಐತಿಹಾಸಿಕ ಮಹತ್ವದ ಸ್ಥಳಗಳಿಗೆ ಸಾಕ್ಷಿಯಾಗಿರುವ ಕರಾವಳಿ ಜಿಲ್ಲೆ ಉಡುಪಿಯಲ್ಲಿ ಅಪರೂಪದ ಶಾಸನವೊಂದು ಪತ್ತೆಯಾಗಿದೆ. ಉಡುಪಿ ಜಿಲ್ಲೆಯ ಕೊಕ್ಕರ್ಣೆ ಗ್ರಾಮ ಪಂಚಾಯತ್ ಅಧ್ಯಕ್ಷೆ ಲಕ್ಷ್ಮಿ ಎಂಬವರು ನೀಡಿರುವ ಮಾಹಿತಿಯ ಆಧಾರದಲ್ಲಿ ನಡೆಸಲಾದ ಕ್ಷೇತ್ರಕಾರ್ಯದಿಂದ ಶಾಸನದ ವಿವರಗಳನ್ನು ಕಲೆ ಹಾಕಲಾಗಿದೆ. ಉಡುಪಿಯ ರಾಷ್ಟ್ರಕವಿ ಗೋವಿಂದ ಪೈ ಸಂಶೋಧನಾ ಕೇಂದ್ರದ ಆಡಳಿತಾಧಿಕಾರಿಯಾದ ಬಿ. ಜಗದೀಶ ಶೆಟ್ಟಿಯವರ ನೇತೃತ್ವದಲ್ಲಿ ಶಾಸನದ ಪರಿಶೋಧನೆ ನಡೆಸಲಾಯಿತು.
ಕೊಕ್ಕರ್ಣೆಯ ಚರ್ಗಿಬೆಟ್ಟು ಕುದಿ ಪೆಜಮಂಗೂರು ಗ್ರಾಮದ ಗಡಿಪ್ರದೇಶದಲ್ಲಿ ವಿಜಯನಗರ ಕಾಲದ ಸಂಗಮ ಮನೆತನದ ಇಮ್ಮಡಿ ದೇವರಾಯ ಕಾಲದ ಶಾಸನ ಇದು ಅನ್ನೋದು ಗೊತ್ತಾಗಿದೆ.
ಗ್ರಾನೈಟ್ ಶಿಲೆಯಲ್ಲಿ ಕೆತ್ತಲ್ಪಟ್ಟಿರುವ ಈ ಶಾಸನದ ಕೆಳಭಾಗವು ತುಂಡಾಗಿದೆ. ಎರಡು ಅಡಿ ಎತ್ತರ ಮತ್ತು 2 ಅಡಿ ಅಗಲವನ್ನು ಈ ಶಾಸನ ಹೊಂದಿದೆ. 16 ಸಾಲುಗಳನ್ನು ಕಲ್ಲಿನ ಮೇಲೆ ಬರೆಯಲಾಗಿದೆ. ಈ ಶಾಸನವು ಕನ್ನಡ ಲಿಪಿ ಮತ್ತು ಭಾಷೆಯಲ್ಲಿದ್ದು ಶಾಸನದ ಬಹುತೇಕ ಭಾಗಗಳು ಅಳಿಸಿ ಹೋಗಿರುತ್ತದೆ.
ಈ ಶಾಸನವನ್ನು ಇತಿಹಾಸ ಮತ್ತು ಪುರಾತತ್ವ ಸಂಶೋಧನಾರ್ಥಿ ಶೃತೇಶ್ ಆಚಾರ್ಯ ಮೂಡುಬೆಳ್ಳೆ ಅವರು ಅಧ್ಯಯನ ಮಾಡಿರುತ್ತಾರೆ. ಕ್ಷೇತ್ರ ಕಾರ್ಯಶೋಧನೆಗೆ ಲಕ್ಷ್ಮಿ, ನಾಗೇಶ್ ನಾಯಕ್, ರಾಘವೇಂದ್ರ ಕೊಡ್ಲಯ ಸಹಕರಿಸಿದ್ದಾರೆ. ಸದ್ಯ ಶಾಸನದ ಸಂರಕ್ಷಣೆಗೆ ದೃಷ್ಟಿಯಿಂದ ಚಗ್ರಿಬೆಟ್ಟು ಪ್ರದೇಶದಿಂದ ಸಂಶೋಧನಾ ಕೇಂದ್ರಕ್ಕೆ ಇದನ್ನು ರವಾನಿಸಲಾಗಿದೆ.
Kshetra Samachara
30/05/2022 06:31 pm