ಮುಲ್ಕಿ: ರಾಷ್ಟ್ರೀಯ ಹೆದ್ದಾರಿ 66ರ ಮುಲ್ಕಿ ಬಸ್ಸು ನಿಲ್ದಾಣದ ಬಳಿಯಲ್ಲಿ ಸರ್ವಿಸ್ ರಸ್ತೆ ಕಾಮಗಾರಿ ಕಳೆದ ಕೆಲ ದಿನಗಳ ಹಿಂದೆ ಆರಂಭವಾಗಿದ್ದು ಅರ್ಧಂಬರ್ಧ ಕಾಮಗಾರಿಯಿಂದ ಪ್ರಯಾಣಿಕರಿಗೆ ವಾಹನ ಸವಾರರಿಗೆ ಮತ್ತಷ್ಟು ಸಂಕಷ್ಟ ಎದುರಾಗಿದೆ.
ಮುಲ್ಕಿ ಬಸ್ ನಿಲ್ದಾಣದ ರಿಕ್ಷಾ ಪಾರ್ಕ್ ಬಳಿ ಸರ್ವಿಸ್ ರಸ್ತೆ ಕಾಮಗಾರಿ ಕಳೆದ ಕೆಲ ದಿನಗಳ ಹಿಂದೆ ನಡೆದಿದ್ದು ಫುಟ್‌ಪಾತ್ ಮೇಲೆ ಜಲ್ಲಿಕಲ್ಲುಗಳನ್ನು ಹರಡಲಾಗಿದೆ. ಇದರಿಂದ ಪಾದಚಾರಿಗಳಿಗೆ ನಡೆದಾಡಲೂ ಅಸಾಧ್ಯವಾದ ಪರಿಸ್ಥಿತಿ ಎದುರಾಗಿದೆ. ಇನ್ನೊಂದೆಡೆ ಸರ್ವಿಸ್ ರಸ್ತೆಯಲ್ಲಿ ವಾಹನ ನಿಲುಗಡೆಯಾಗುತ್ತಿದ್ದು ವಾಹನ ಸಂಚಾರ ಗೊಂದಲಮಯವಾಗಿ ಪರಿಣಮಿಸಿದೆ.
ಮುಲ್ಕಿ ಬಸ್ ನಿಲ್ದಾಣದ ಹೆದ್ದಾರಿ ಜಂಕ್ಷನ್ ಸರ್ವೀಸ್ ರಸ್ತೆ ಅರೆಬರೆ ಡಾಂಬರೀಕರಣದಿಂದ ಮತ್ತಷ್ಟು ಅಪಘಾತದ ಭೀತಿ ಎದುರಾಗಿದ್ದು ಅಪಘಾತ ತಡೆಗೆ ತಾತ್ಕಾಲಿಕವಾಗಿ ಬ್ಯಾರಿಕೇಡ್ ಇರಿಸಲಾಗಿದ್ದರೂ ಹೆದ್ದಾರಿಯಲ್ಲಿ ಅತಿವೇಗದಿಂದ ಬರುತ್ತಿರುವ ತಡೆರಹಿತ ಬಸ್ಸು ಹಾಗೂ ಇತರ ವಾಹನಗಳಿಂದ ನಿಲ್ದಾಣದ ಆಟೋ ಚಾಲಕರಿಗೆ ಹಾಗೂ ಬಸ್ಸಿಗಾಗಿ ಕಾಯುತ್ತಿರುವ ಪ್ರಯಾಣಿಕರಿಗೆ ಪ್ರಾಣ ಭೀತಿ ಎದುರಾಗಿದೆ. ಕೂಡಲೇ ಹೆದ್ದಾರಿ ಇಲಾಖೆಯ ಅಧಿಕಾರಿಗಳು, ಶಾಸಕರು ಎಚ್ಚೆತ್ತು ಅರ್ಧಂಬರ್ಧ ನಡೆಸಿದ ಕಾಮಗಾರಿಯನ್ನು ಪೂರ್ತಿಗೊಳಿಸಬೇಕು ಎಂದು ಸ್ಥಳೀಯ ನಾಗರಿಕರು ಆಗ್ರಹಿಸಿದ್ದಾರೆ.
Kshetra Samachara
08/05/2022 09:55 pm