ಉಡುಪಿ: ನಗರದ ಸರ್ವಿಸ್ ಬಸ್ ನಿಲ್ದಾಣದ ಬಳಿಯ ಗಡಿಯಾರ ಗೋಪುರ (ಕ್ಲಾಕ್ ಟವರ್) ಅವ್ಯವಸ್ಥೆಗಳ ಕೊಂಪೆಯಾಗಿ ಮಾರ್ಪಾಡಾಗಿದೆ. ಇಲ್ಲಿ ಸಾರ್ವಜನಿಕ ಕುಡಿಯುವ ನೀರಿನ ನಳ ಇದ್ದು, ಅದು ಹಾಳು ಬಿದ್ದು ವರ್ಷಗಳೇ ಕಳೆದಿವೆ. ನೀರು ತಂಪಾಗಿಸುವ ಶೀತಲೀಕೃತ ಯಂತ್ರವು ಹಾಳಾಗಿ ತುಕ್ಕು ಹಿಡಿದಿದೆ. ಯಂತ್ರ ರಕ್ಷಿಸಿಟ್ಟಿರುವ ಕೊಠಡಿ ಕುಡುಕರ ಶೌಚಾಲಯವಾಗಿ ಮಾರ್ಪಟ್ಟಿದೆ. ಬಿಸಿಲಿನ ತಾಪಮಾನ ಏರುಗತಿಯಲ್ಲಿದ್ದು, ಪ್ರಯಾಣಿಕರು, ಯಾತ್ರಾರ್ಥಿಗಳು, ಪ್ರವಾಸಿಗರು ಕುಡಿಯುವ ನೀರಿಗಾಗಿ ಹುಡುಕಾಟ ನಡೆಸಬೇಕಾದ ಪರಿಸ್ಥಿತಿ ಇಲ್ಲಿ ಎದುರಾಗಿದೆ.
ಇನ್ನು ಗಡಿಯಾರ ಗೋಪುರದ ತಳಭಾಗದಲ್ಲಿ ಗಾಂಧಿ ಪ್ರತಿಮೆ ಇದ್ದು, ಅಲ್ಲಿ ಕುಡುಕರು ನಿದ್ರಿಸುವುದು ನಿತ್ಯದ ದೃಶ್ಯ. ಪರಿಸರದಲ್ಲಿ ಕಸ ತ್ಯಾಜ್ಯಗಳ ರಾಶಿ ಬಿದ್ದುಕೊಂಡಿದ್ದು ಪರಿಸರದಲ್ಲಿ ಗಬ್ಬು ವಾಸನೆ ಹರಡುತ್ತಿದೆ. ಗಡಿಯಾರ ಗೋಪುರದ ಸುತ್ತ ಅಳವಡಿಸಿರುವ ಆವರಣ ಬೇಲಿಯನ್ನು ಕಿಡಿಗೇಡಿಗಳು ಘಾಸಿಗೊಳಿಸಿ, ಕಲ್ಲು ಕಂಬಗಳನ್ನು ಉರುಳಿಸಿದ್ದಾರೆ.ತಕ್ಷಣ ನಗರಸಭೆ ಇತ್ತ ಕಡೆ ಗಮನಹರಿಸಿ ಅವ್ಯವಸ್ಥೆ ಸರಿಪಡಿಸುವಂತೆ ಸಮಾಜಸೇವಕರು ಆಗ್ರಹಿಸಿದ್ದಾರೆ.
Kshetra Samachara
05/05/2022 02:56 pm