ವಿಶೇಷ ವರದಿ: ರಹೀಂ ಉಜಿರೆ
ಕಾಪು: ಅವರೆಲ್ಲ ಈ ಮಣ್ಣಿನ ಮೂಲ ನಿವಾಸಿಗಳು.ಸ್ವಂತದ್ದೊಂದು ಸೂರು ಕಟ್ಟಿಕೊಳ್ಳಬೇಕು ಎಂಬ ಸುಂದರ ಕನಸು ಕಂಡವರು. ಸತತ ಹೋರಾಟದ ಬಳಿಕ ಸರಕಾರ ನಿವೇಶನವನ್ನೇನೋ ನೀಡಿತು.ಎಂತಹ ನಿವೇಶನ? ಇಲ್ಲಿದೆ ಡಿಟೇಲ್ಸ್..
ಉಡುಪಿ ಜಿಲ್ಲೆಯ ಕೊರಗ ಜನಾಂಗದ 23 ಮಹಿಳೆಯರು ನಿವೇಶನ ಕೊಡಿ ಎಂದು ಸರ್ಕಾರಕ್ಕೆ ಮನವಿ ಮಾಡಿದ್ದು ಹನ್ನೊಂದು ವರ್ಷಗಳ ಹಿಂದೆ.ಜನ ಪ್ರತಿನಿಧಿಗಳ ಮನೆ ಬಾಗಿಲು ಅಲೆದಾಡಿ 2011ರಲ್ಲಿ 23 ಮಂದಿ ಕೊರಗ ಜನಾಂಗದ ಮಹಿಳೆಯರಿಗೆ ಕಾಪು ವಿಧಾನಸಭಾ ವ್ಯಾಪ್ತಿಯ ಬೊಮ್ಮನಬೆಟ್ಟು ಗ್ರಾಮದ ಕೊಂಡಾಡಿ ಎಂಬಲ್ಲಿ 2.61 ಎಕ್ರೆ ಜಾಗ ಮಂಜೂರಾಗಿ ನಿವೇಶನದ ಹಕ್ಕು ಪತ್ರ ಸಿಗುತ್ತದೆ. ಆದರೆ ಸರ್ಕಾರ ನೀಡಿದ ಜಾಗದಲ್ಲಿ ಮನೆ ಕಟ್ಟಿಕೊಳ್ಳುತ್ತಿದ್ದರೆ, ಕೆಲ ಮಂದಿಯ ಹೆಣವೇ ಬೀಳುತ್ತಿತ್ತು. ಇದಕ್ಕೆ ಮುಖ್ಯ ಕಾರಣ, ಸರ್ಕಾರ ನಡೆಸಿದ ಅವೈಜ್ಞಾನಿಕ ಕಾಮಗಾರಿ.ಸರಕಾರ ಎಲ್ಲೋ ಮೂಲೆಯಲ್ಲಿ ಕೊಟ್ಟ ಯೋಗ್ಯವಲ್ಲದ ಗುಡ್ಡೆಯನ್ನು ಈ ಮಹಿಳೆಯರು 2 ಲಕ್ಷ ನೀಡಿ ಸಮತಟ್ಟು ಮಾಡಿದರು.ಅದೀಗ ಮಳೆಗೆ ಕೊಚ್ಚಿ ಹೋಗಿದ್ದು ಮಹಿಳೆಯರು ನ್ಯಾಯಕ್ಕಾಗಿ ಮಾನವ ಹಕ್ಕುಗಳ ಪ್ರತಿಷ್ಠಾನದ ಮೊರೆ ಹೋಗಿದ್ದಾರೆ.
ಇನ್ನು ಮಾನವ ಹಕ್ಕುಗಳ ಪ್ರತಿಷ್ಠಾನ ಈ ಬಗ್ಗೆ, ಕರ್ತವ್ಯಲೋಪ ಮಾಡಿದ ಗಿರಿಜನ ಯೋಜನಾ ಸಮನ್ವಯಾಧಿಕಾರಿ ವಿರುದ್ಧ ಲೋಕಾಯುಕ್ತಕ್ಕೆ ದೂರು ನೀಡಿತು. ಹೀಗಾಗಿ ಕೊನೆಗೂ ಎಚ್ಚೆತ್ತುಕೊಂಡ ಸರ್ಕಾರ 50 ಲಕ್ಷ ವೆಚ್ಚದಲ್ಲಿ ಜಮೀನನ್ನು ಮೂರು ಹಂತದಲ್ಲಿ ಅವೈಜ್ಞಾನಿಕವಾಗಿ ಸಮತಟ್ಟು ಮಾಡಿ, ತಡೆಗೋಡೆ ನಿರ್ಮಿಸಿ ಮನೆ ಕಟ್ಟಿಕೊಳ್ಳಿ ಎಂದು ಹೇಳಿತು. ಆದರೆ ಅವೈಜ್ಞಾನಿಕವಾಗಿ ಮಾಡಿದ ಕಾಮಗಾರಿಯಿಂದ ಮಳೆಗಾಲದಲ್ಲಿ ತಡೆಗೋಡೆ ಕುಸಿದು ಬಿದ್ದಿದೆ! ಸಮತಟ್ಟು ಮಾಡಿದ ಮಣ್ಣು ಕುಸಿದಿದೆ.
ಒಟ್ಟಿನಲ್ಲಿ, ನಿವೇಶನ ಮಂಜೂರಾಗಿ ಹತ್ತು ವರ್ಷ ಕಳೆದ್ರೂ ಮನೆ ಕಟ್ಟಿಕೊಳ್ಳಲಾಗದ ತ್ರಿಶಂಕು ಪರಿಸ್ಥಿತಿ ಮೂಲ ನಿವಾಸಿಗಳದ್ದು.ಹೀಗಾಗಿ ನಮಗೆ ಬೇರೆ ನಿವೇಶನ ಕೊಡಿ ಎನ್ನುವ ಒತ್ತಾಯ ಕೊರಗ ಜನಾಂಗದ ಈ ಮಹಿಳೆಯರದ್ದು. ಸರ್ಕಾರ ಈ ಬಗ್ಗೆ ಕೂಡಲೇ ಎಚ್ಚೆತ್ತುಕೊಂಡು ನ್ಯಾಯ ಒದಗಿಸಬೇಕಿದೆ.
Kshetra Samachara
11/12/2021 05:36 pm