ಪುತ್ತೂರು: ಸಾರ್ವಜನಿಕ ಕ್ಷೇತ್ರದಲ್ಲಿ ಸಾಧನೆ ತೋರಿದ ಸಾಧಕರ ಕಥೆ ಕೇಳುವಾಗ ಸಾಧನೆ ಮಾಡಿದ ವ್ಯಕ್ತಿ ಮುಳ್ಳಿನ ಹಾದಿಯಲ್ಲಿ ನಡೆದು ಸಾಧನೆ ತೋರಿದ್ದಾರೆ ಎನ್ನುವ ವಿಚಾರ ಸಾಮಾನ್ಯ. ಆದರೆ, ನಿಜವಾದ ಮುಳ್ಳಿನ ಹಾದಿಯನ್ನು ನೋಡಿದವರು ಮಾತ್ರ ಕಡಿಮೆಯೇ ಇರಬಹುದೇನೋ. ಆದರೆ, ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನ ಗ್ರಾಮವೊಂದರ ಜನ ಮಾತ್ರ ಪ್ರತೀ ದಿನವೂ ಮುಳ್ಳಿನ ಹಾದಿಯಲ್ಲೇ ನಡೆಯುತ್ತಿದ್ದಾರೆ!
ಹೌದು. ಪುತ್ತೂರಿನ ಪುರುಷರಕಟ್ಟೆಯಿಂದ ಆನಡ್ಕ ಎಂಬ ಊರಿಗೆ ಹೋಗುವ ರಸ್ತೆಯ ಇಕ್ಕೆಲದಲ್ಲಿ ಪೊದೆ ತುಂಬಿದ್ದು, ಈ ಪೊದೆಗಳ ಮಧ್ಯೆ ಅತ್ಯಂತ ಅಪಾಯಕಾರಿ ಮುಳ್ಳುಗಳು ತುಂಬಿಕೊಂಡಿವೆ. ಈ ಮುಳ್ಳುಗಳು ಇದೀಗ ರಸ್ತೆಯನ್ನೂ ಆಕ್ರಮಿಸಿಕೊಂಡಿದ್ದು, ರಸ್ತೆಯಲ್ಲಿ ಹೋಗುವ ವಾಹನ ಹಾಗೂ ಪಾದಚಾರಿಗಳಿಗೆ ಅಪಾಯಕಾರಿಯಾಗಿ ಪರಿಣಮಿಸಿದೆ.
ಕಡಿದಾದ ಈ ರಸ್ತೆಯಲ್ಲಿ ಒಂದು ವಾಹನವಷ್ಟೇ ಹಾದುಹೋಗುವ ಸ್ಥಳಾವಕಾಶವಿದ್ದು, ಇನ್ನೊಂದು ಕಡೆಯಿಂದ ವಾಹನ ಬಂದಲ್ಲಿ ಆ ವಾಹನಗಳಿಗೆ ಈ ಮುಳ್ಳು ಅಪಾಯಕಾರಿಯಾಗಿದೆ. ಹಲವು ಆಟೋಗಳ ಟರ್ಪಾಲ್ ಹರಿದುಹೋಗಿದೆ. ರಸ್ತೆಯಲ್ಲಿ ವಾಹನ ಸಾಗುವಾಗ ಪಾದಚಾರಿಗಳು ಮುಳ್ಳಿನ ಮೇಲೆಯೇ ಬೀಳಬೇಕಾದ ಸ್ಥಿತಿ ನಿತ್ಯ ಕಥೆಯಾಗಿದೆ.
ಈ ಮುಳ್ಳುಗಳು ಒಮ್ಮೆ ಮೈಕೈ ಗೆ ಅಥವಾ ಬಟ್ಟೆಗೆ ತಾಕಿತೆಂದರೆ, ಬಟ್ಟೆಯನ್ನು ಅಲ್ಲೇ ಬಿಟ್ಟು ಬರಬೇಕು ಎನ್ನುವ ಮಟ್ಟಿಗೆ ಈ ಮುಳ್ಳುಗಳಿವೆ. ಪ್ರತೀ ವರ್ಷವೂ ಈ ರಸ್ತೆಯ ಎರಡೂ ಪಕ್ಕದಲ್ಲಿ ಈ ಮುಳ್ಳುಗಳು ಬೆಳೆಯುತ್ತಿದ್ದು, ಸ್ಥಳೀಯ ನರಿಮೊಗರು ಗ್ರಾಪಂ ಈ ಮುಳ್ಳಿನ ಗಿಡ- ಪೊದೆಗಳನ್ನು ಶೀಘ್ರ ತೆರವುಗೊಳಿಸಬೇಕೆಂದು ಸ್ಥಳೀಯ ರಿಕ್ಷಾ ಚಾಲಕ ಸುರೇಶ್ ಒತ್ತಾಯಿಸಿದ್ದಾರೆ.
Kshetra Samachara
11/11/2021 05:25 pm