ಬಜಪೆ: ಬಜಪೆಯಿಂದ ಕೈಕಂಬಕ್ಕೆ ಸಾಗುವಂತಹ ರಸ್ತೆಯ ಬಜಪೆ ಪೊಲೀಸ್ ಠಾಣೆ ಸಮೀಪ ರಸ್ತೆಯಲ್ಲಿ ಬೃಹತ್ ಗಾತ್ರದ ಹೊಂಡವೊಂದು ಉಂಟಾಗಿ ವಾಹನ ಸವಾರ ರಿಗೆ ಮೃತ್ಯುಕೂಪವಾಗಿ ಪರಿಣಮಿಸಿದೆ. ಬಜಪೆ ಪೊಲೀಸ್ ಠಾಣೆಯ ಕೈಕಂಬ ಹಾಗೂ ಮಂಗಳೂರು ವಿಮಾನ ನಿಲ್ದಾಣಕ್ಕೆ ಸಾಗುವಂತಹ ರಸ್ತೆಯ ಜಂಕ್ಷನ್ ನಲ್ಲಿ ಬೃಹತ್ ಗಾತ್ರದ ಹೊಂಡ ಉಂಟಾಗಿದೆ.
ಮಂಗಳೂರು ವಿಮಾನ ನಿಲ್ದಾಣ ಹಾಗೂ ಕೈಕಂಬ, ಗುರುಪುರ ಹಾಗೂ ಬಜಪೆ ಕಡೆಯಿಂದ ಸಾಗುವಂತಹ ವಾಹನಗಳು ಈ ರಸ್ತೆಯ ಮುಖೇನವೇ ಸಂಚರಿಸುತ್ತದೆ. ರಸ್ತೆಯಲ್ಲಿನ ಬೃಹತ್ ಗಾತ್ರದ ಹೊಂಡದಲ್ಲಿ ಮಳೆ ನೀರು ತುಂಬಿ ಹೊಂಡವು ವಾಹನ ಸವಾರ ರಿಗೆ ಗೋಚರಿಸದಂತಾಗಿದೆ. ಜನರಿಂದ ಮತವನ್ನು ಪಡೆದು ಚುನಾಯಿತರಾದ ಜನ ಪ್ರತಿನಿಧಿಗಳು ಕೂಡ ಈ ರಸ್ತೆಯಲ್ಲಿಯೇ ಸಂಚರಿಸುತ್ತಾರೆ. ಪೋಲಿಸ್ ಠಾಣೆಯೂ ಸಮೀಪದಲ್ಲೇ ಇದೆ.ಆದರೆ ರಸ್ತೆಯಲ್ಲಿನ ದೊಡ್ಡ ಗಾತ್ರದ ಹೊಂಡದ ಬಗ್ಗೆ ಚಕಾರ ಎತ್ತಲ್ಲ.
ಕಳೆದ ಎರಡು ದಿನಗಳ ಹಿಂದೆ ಸುರಿದ ಭಾರೀ ಮಳೆಗೆ ಈ ಬೃಹತ್ ಹೊಂಡದಲ್ಲಿ ನೀರು ತುಂಬಿಕೊಂಡಿತ್ತು. ಹೊಂಡದಲ್ಲಿ ನೀರು ತುಂಬಿದ ಪರಿಣಾಮ ಕೆಲ ದ್ವಿಚಕ್ರ ವಾಹನ ಸವಾರರು ಪರದಾಡುವಂತಾಯಿತು. ರಾತ್ರಿ ಸಮಯದಲ್ಲಿ ಈ ರಸ್ತೆಯಲ್ಲಿ ವಾಹನ ಸವಾರರು ಸಂಚಾರಿಸಲು ಬಹಳಷ್ಟು ಕಷ್ಟಕರವಾಗಿದೆ. ಈ ಬಗ್ಗೆ ಸಂಬಂಧಪಟ್ಟವರು ಎಚ್ಚೆತ್ತುಕೊಳ್ಳಬೇಕಾಗಿದೆ ಎಂದು ಸ್ಥಳೀಯರೊಬ್ಬರು ಮನವಿ ಮಾಡಿಕೊಂಡಿದ್ದಾರೆ.
Kshetra Samachara
14/09/2021 01:17 pm