ಮಂಗಳೂರು: ಕಾರ್ಮಿಕ ಇಲಾಖೆ ವತಿಯಿಂದ ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಸದಸ್ಯರಿಗೆ ಆಹಾರ ಕಿಟ್ ಬುಧವಾರ ಪತ್ರಿಕಾ ಭವನದಲ್ಲಿ ಶಾಸಕರಾದ ವೇದವ್ಯಾಸ ಕಾಮತ್ ಹಾಗು ಡಾ.ವೈ.ಭರತ್ ಶೆಟ್ಟಿ ವಿತರಿಸಿದರು.ಕೊರೊನಾ ಲಾಕ್ ಡೌನ್ ಸಮಸ್ಯೆಯಿಂದ ಪತ್ರಕರ್ತರು ಕೂಡ ಸಂಕಷ್ಟಕ್ಕೆ ಸಿಲುಕಿದ್ದು, ಅವರಿಗೆ ಸರ್ಕಾರ ಕಾರ್ಮಿಕ ಇಲಾಖೆ ಮೂಲಕ ನೀಡಿದ ಆಹಾರ ಕಿಟ್ ಆತ್ಮಸ್ಥೈರ್ಯ ತುಂಬಲು ಸಹಕಾರಿಯಾಗಿದೆ ಎಂದು ವೇದವ್ಯಾಸ ಕಾಮತ್ ಹೇಳಿದರು.
ಕೊರೊನಾದಿಂದಾಗಿ ಎಲ್ಲ ಕ್ಷೇತ್ರವೂ ಮುಗ್ಗರಿಸಿದ್ದು, ಸರ್ಕಾರ ಅಸ್ತಿತ್ವಕ್ಕೆ ಬಂದ ಆರಂಭದಿಂದ ನೆರೆ, ಕೊರೊನಾದಿಂದ ಸವಾಲುಗಳನ್ನು ಎದುರಿಸುತ್ತಲೇ ಬಂದಿದೆ. ಆದರೆ ಜನಸಾಮಾನ್ಯರ ಬಗ್ಗೆ ವಿಶೇಷ ಕಾಳಜಿ ಹೊಂದಿ, ಶಕ್ತಿ ಮೀರಿ ಸವಲತ್ತುಗಳನ್ನು ಒದಗಿಸುತ್ತಿದೆ ಎಂದು ಡಾ.ವೈ.ಭರತ್ ಶೆಟ್ಟಿ ಹೇಳಿದರು.
ದ.ಕನ್ನಡ ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ ನಾಯಕ್ ಇಂದಾಜೆ ಅಧ್ಯಕ್ಷತೆ ವಹಿಸಿದ್ದರು. ಕಾರ್ಮಿಕ ಅಧಿಕಾರಿಗಳಾದ ಅಮರೇಂದ್ರ, ಕಾವೇರಿ, ಮನಪಾ ಸದಸ್ಯ ಮನೋಹರ್ ಕದ್ರಿ, ವಾರ್ತಾಧಿಕಾರಿ ರವಿರಾಜ್ ಹೆಚ್.ಜಿ. ಉಪಸ್ಥಿತರಿದ್ದರು. ದ.ಕನ್ನಡ ಜಿಲ್ಲಾ ಪತ್ರಕರ್ತರ ಸಂಘದ ಪ್ರ.ಕಾರ್ಯದರ್ಶಿ ಇಬ್ರಾಹಿಂ ಅಡ್ಕಸ್ಥಳ ವಂದಿಸಿದರು. ಕಾರ್ಯಕಾರಿ ಸಮಿತಿ ಸದಸ್ಯ ಆತ್ಮಭೂಷಣ್ ಕಾರ್ಯಕ್ರಮ ನಿರೂಪಿಸಿದರು.
Kshetra Samachara
08/09/2021 06:32 pm