ಕುಂದಾಪುರ/ಬೈಂದೂರು: "ನಮ್ಮ ಮನೆ ತೋಟ ಎಲ್ಲ ಹೋಯ್ತು: ಹೇಳುವವರೂ ಇಲ್ಲ, ಕೇಳುವವರೂ ಇಲ್ಲ". ಇದು ಬೈಂದೂರು ತಾಲೂಕಿನ ನೆರೆ ಪೀಡಿತ ಗ್ರಾಮಸ್ಥರ ಅಳಲು!
ಹೌದು, ಜಿಲ್ಲೆಯಾದ್ಯಂತ ಶುಕ್ರವಾರವೂ ಧಾರಾಕಾರ ಮಳೆಯಾದ ಪರಿಣಾಮ ಕುಂದಾಪುರ, ನಾವುಂದ, ಉಳ್ಳೂರು, ಬೈಂದೂರು, ಕಾಪು ತಾಲೂಕಿನ ಗ್ರಾಮೀಣ ಭಾಗಗಳಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗಿದೆ. ಈ ಭಾಗದಲ್ಲಿ ಜನರನ್ನು ಸ್ಥಳಾಂತರಿಸಲಾಗುತ್ತಿದ್ದು, ಕಾಳಜಿ ಕೇಂದ್ರಗಳನ್ನು ತೆರೆಯಲು ಜಿಲ್ಲಾಡಳಿತ ಸೂಚನೆ ನೀಡಿದೆ. ಇದೇವೇಳೆ ಇಂದೂ ಕೂಡ ಜಿಲ್ಲೆಯಲ್ಲಿ ರೆಡ್ ಅಲರ್ಟ್ ಮುಂದುವರಿದಿದೆ.
ಗುರುವಾರ ಮತ್ತು ಶುಕ್ರವಾರ ಭಾರಿ ಮಳೆಯಾಗಿದ್ದು, ಶುಕ್ರವಾರ ಬೆಳಗ್ಗೆ ಬಹಳ ಹೊತ್ತು ಉತ್ತಮ ಮಳೆಯಾಗಿದೆ. ಗುರುವಾರ ರಾತ್ರಿ ಸುರಿದ ಮಳೆಗೆ ಜಿಲ್ಲೆಯಲ್ಲಿ 5 ಮನೆಗಳು ಸಂಪೂರ್ಣ ಕುಸಿದಿದ್ದು, 18 ಮನೆಗಳಿಗೆ ಹಾನಿಯಾಗಿದೆ.ಕುಂದಾಪುರ ತಾಲೂಕಿನ ಕಾಳಾವರ ಗ್ರಾಮದ ನಾಗರತ್ನ, ಬೈಂದೂರು ತಾಲೂಕಿನ ಕೊಲ್ಲೂರು ಗ್ರಾಮದ ಸಾಕು, ನಾವುಂದ ಗ್ರಾಮದ ಖತೀಜಾ ಯುಸೂಫ್, ಕಿರಿಮಂಜೇಶ್ವರ ಗಾಮದ ನಾರಾಯಣ, ಬಿಜೂರು ಗ್ರಾಮದ ಸುಶೀಲ ಎಂಬುವರ ಮನೆ ಸಂಪೂರ್ಣ ಹಾನಿಯಾಗಿದೆ. ಉಡುಪಿ ಹಾಗೂ ಬ್ರಹ್ಮಾವರ ತಾಲೂಕಿನಲ್ಲಿ ತಲಾ 3 ಮನೆಗಳಿಗೆ, ಕಾಪು ತಾಲೂಕಿನಲ್ಲಿ 2, ಕುಂದಾಪುರ ತಾಲೂಕಿನಲ್ಲಿ 10 ಮತ್ತು ಬೈಂದೂರು ತಾಲೂಕಿನಲ್ಲಿ 5 ಮನೆಗಳಿಗೆ ಭಾಗಶಃ ಹಾನಿಯಾಗಿದೆ.
ಬೈಂದೂರು ತಾಲೂಕಿನ ತೆಗ್ಗರ್ಸೆ ಗ್ರಾಮದಲ್ಲಿ ಅಕ್ಷರಶಃ ಜಲಪ್ರಳಯ ಆಗಿದೆ.ಈ ಭಾಗದ ಹಲವು ಮನೆಗಳು ಜಲಾವೃತಗೊಂಡಿದ್ದು ಕೃಷಿಭೂಮಿಯಲ್ಲಿ ನೆರೆ ನೀರು ತುಂಬಿದೆ. ನಾವು ಎಲ್ಲ ಕಳೆದುಕೊಂಡಿದ್ದೇವೆ,ನಮ್ಮನ್ನು ಕೇಳುವವರೇ ಇಲ್ಲ ಅಂತಾರೆ ಇಲ್ಲಿಯ ಗ್ರಾಮಸ್ಥರು.
Kshetra Samachara
09/07/2022 12:29 pm