ಉಡುಪಿ: ಪುರಾಣ ಪ್ರಸಿದ್ಧ ಇಂದ್ರಾಣಿ ನದಿ ಕಲುಷಿತವಾಗುತ್ತಿದೆ! ನಗರದಿಂದ ಹರಿಯುವ ಕೊಳಚೆ ನೀರೆಲ್ಲ 'ಇಂದ್ರಾಣಿ' ಒಡಲು ತುಂಬುತ್ತಿದ್ದು, ಈ ಬಗ್ಗೆ ಸ್ಥಳೀಯರು ಇದೀಗ ತಮ್ಮ ಆಕ್ರೋಶ ಹೊರಹಾಕುತ್ತಿದ್ದಾರೆ.
ಉಡುಪಿಯ ಇಂದ್ರಾಣಿ ದೇಗುಲ ಹನ್ನೊಂದನೇ ಶತಮಾನದ್ದು. ಇಲ್ಲಿನ ಶ್ರೀ ಆಂಜನೇಯ ಸನ್ನಿಧಿಯಲ್ಲಿ ಹುಟ್ಟುವ ಪವಿತ್ರ ನದಿಯೇ ಇಂದ್ರಾಣಿ. ಈಕೆಯ ಸದ್ಯದ ಸ್ಥಿತಿ ನೋಡಿದ್ರೆ ಯಾರಿಗಾದರೂ ಬೇಸರವಾಗುತ್ತೆ. ಇಂದ್ರಾಣಿ ದೇವಸ್ಥಾನ, ಉಡುಪಿಯ ಕೃಷ್ಣಮಠ, ಕೊಡವೂರು ಶಂಕರನಾರಾಯಣ ಮುಂತಾದ ಪುರಾಣ ಪ್ರಸಿದ್ಧ ಕ್ಷೇತ್ರಗಳ ಪಕ್ಕದಲ್ಲೇ ಹರಿದು ಹೋಗುವ ಈ ನದಿಗೆ ಮನೆಗಳ ತ್ಯಾಜ್ಯ, ಮಠದ ಪರಿಸರದಲ್ಲಿ ಲಾಡ್ಜ್ ಗಳು ಹೊರ ಚೆಲ್ಲುವ ಕೊಳಕು ನೇರವಾಗಿ ಸೇರುತ್ತಿದೆ.
ಅಷ್ಟು ಮಾತ್ರವಲ್ಲ, ಸ್ವಚ್ಛತೆಯಲ್ಲಿ ನಂ.1 ಎಂದು ಕರೆಸಿಕೊಳ್ಳುವ ಉಡುಪಿ ನಗರಸಭೆಯ ನಿರ್ಲಕ್ಷ್ಯವೂ ನದಿ ಹಾಳಾಗಲು ಕಾರಣವಾಗಿದೆ. ನಿಟ್ಟೂರಿನಲ್ಲಿ ನಗರಸಭೆಯ ಕೊಳಚೆ ನೀರಿನ ಸ್ವಚ್ಛತಾ ಘಟಕವಿದ್ದು, ಅಲ್ಲಿ ಯಾವುದೇ ವೈಜ್ಞಾನಿಕ ಪ್ರಕ್ರಿಯೆ ನಡೆಸದೆ ನೇರವಾಗಿ ಕೊಳಕು ನೀರನ್ನು ನದಿಗೆ ಹಾಯಿಸಲಾಗುತ್ತಿದೆ. ಪರಿಣಾಮ ಉಡುಪಿ ಪರಿಸರದ ಸಾವಿರಾರು ಮನೆ ಬಾವಿಯ ನೀರು ಕುಡಿಯಲು ಯೋಗ್ಯವಾಗಿಲ್ಲ!. ನಗರದಲ್ಲೇ ಹುಟ್ಟಿ 13 ಕಿ.ಮೀ. ಹರಿದು ಸಮುದ್ರ ಸೇರುವ ಈ ಪುಟ್ಟನದಿಯನ್ನು ಉಳಿಸೋದು ನಗರವಾಸಿಗಳ ಜವಾಬ್ದಾರಿ.
ಕಲ್ಮಾಡಿ ಸಮೀಪದಲ್ಲಿ ಇದು ಹಿನ್ನೀರಿನಲ್ಲಿ ಸೇರಿಕೊಳ್ಳುತ್ತೆ. ಹೀಗಾಗಿ ಕಲ್ಮಾಡಿಯ ಪರಿಸರದಲ್ಲಿ ನೀರು ಹೆಚ್ಚಾಗಿ ನಿಂತು, ಜನ ಮೂಗು ಮುಚ್ಚಿಕೊಳ್ಳುವ ಪರಿಸ್ಥಿತಿ ನಿರ್ಮಾಣ ಆಗಿದೆ.
"ಹಿಂದೆಲ್ಲ ಈ ನದಿಯಲ್ಲಿ ಈಜು ಕಲಿಯುತ್ತಿದ್ದರು, ಮೀನು ಹಿಡಿಯುತ್ತಿದ್ದರು. ಅಲ್ಲದೆ, ಕೃಷಿಗೂ ಯಥೇಚ್ಛವಾಗಿ ನೀರು ಬಳಕೆಯಾಗುತ್ತಿತ್ತು. ಆದ್ರೀಗ ಇಳಿಯುವುದಕ್ಕೆ ಅಸಾಧ್ಯ. ಮಲ್ಪೆಗೆ ದಿನವೊಂದಕ್ಕೆ ಸಾವಿರಾರು ಮಂದಿ ಪ್ರವಾಸಿಗರು ಆಗಮಿಸುತ್ತಾರೆ. ಅವರೆಲ್ಲ, ಹೋಗುವಾಗ ಮೂಗು ಮುಚ್ಚಿ ಹೋಗುವ ಪರಿಸ್ಥಿತಿ ನಿರ್ಮಾಣ ಆಗಿದೆ. ಕಲ್ಮಾಡಿಯಲ್ಲಿ ನೂರಾರು ಕುಟುಂಬಗಳು ವಾಸವಿದ್ದು, ಅನಾರೋಗ್ಯ ಕಾಡುತ್ತಿದೆ. ಸ್ಥಳೀಯ ದೈವ-ದೇವರುಗಳ ಮೂರ್ತಿ ಬಣ್ಣ ಕಳೆದುಕೊಳುತ್ತಿದೆ. ಹೀಗಾಗಿ ಆದಷ್ಟು ಬೇಗ ಸಮಸ್ಯೆ ಬಗೆಹರಿಸಬೇಕು" ಎನ್ನುವ ಒತ್ತಾಯ ಉಡುಪಿ ಜನರದ್ದು.
ಸಂದೇಶ್ ಶೆಟ್ಟಿ ಆಜ್ರಿ, ಪಬ್ಲಿಕ್ ನೆಕ್ಸ್ಟ್ ಉಡುಪಿ
Kshetra Samachara
18/02/2021 10:35 am