ವಿಶೇಷ ವರದಿ: ರಹೀಂ ಉಜಿರೆ
ಬಾರಕೂರು : ಸತತ ಮೂರು ಬಾರಿ ಗಾಂಧಿಗ್ರಾಮ ಪುರಸ್ಕಾರ ಪಡೆದ ಗ್ರಾಮ ಪಂಚಾಯತ್ , ಬಾರಕೂರಿನ ಹನೆಹಳ್ಳಿ. ಇಲ್ಲಿ ಎಸ್ ಎಲ್ ಆರ್ ಎಂ ಘಟಕವು ಮಹಿಳೆಯೊಬ್ಬರ ಸಾರಥ್ಯದಲ್ಲಿ ನಡೆಯುತ್ತಿದ್ದು ಮಾದರಿ ಎನಿಸಿದೆ.
ಹನೆಹಳ್ಳಿ ಗ್ರಾಮ ಪಂಚಾಯತ್ 4206 ರಷ್ಟು ಜನಸಂಖ್ಯೆಯನ್ನು ಹೊಂದಿದೆ.
ಸ್ವಚ್ಛ ಭಾರತ್ ಮಿಷನ್ ಅಡಿಯಲ್ಲಿ 2 ವರ್ಷದ ಹಿಂದೆ ಘನ ಮತ್ತು ದ್ರವ ತ್ಯಾಜ್ಯ ಘಟಕವು ಇಲ್ಲಿ ಆರಂಭಗೊಂಡಿತು.ಆದರೆ ಗ್ರಾಮೀಣ ಭಾಗದ ಜನರಿಗೆ ತ್ಯಾಜ್ಯ ಸಂಗ್ರಹದ ಕುರಿತು ಸರಿಯಾದ ಮಾಹಿತಿ ಇಲ್ಲದೆ ನಿರ್ವಹಣೆ ನಿಧಾನಗತಿಯಲ್ಲಿತ್ತು.
ಗ್ರಾಮದ ವೀಣಾ ಎಂಬ ಮಹಿಳೆ ಒಂದು ವರ್ಷದಿಂದ ಘಟಕದ ಉಸ್ತುವಾರಿ ವಹಿಸಿಕೊಂಡ ಬಳಿಕ ಗ್ರಾಮದ ಜನರಲ್ಲಿ ಸ್ವಚ್ಛತೆ ಮತ್ತು ಪರಿಸರದ ಕುರಿತು ಅರಿವು ಮತ್ತು ಜಾಗೃತಿ ಹೆಚ್ಚಿದೆ. ಎರಡು ಮಕ್ಕಳ ತಾಯಿಯಾಗಿರುವ ವೀಣಾಗೆ , ಸೈಕಲ್ ಕೂಡಾ ತುಳಿಯುವುದು ಗೊತ್ತಿರಲಿಲ್ಲ. ಸಂಜೀವಿನಿ ಸ್ವ ಸಹಾಯ ಸಂಘದ ಅನುಭವದಿಂದ , ಮನೆಯವರ ಸಹಕಾರದಿಂದ ಬ್ರಹ್ಮಾವರ ರುಡ್ ಸೆಟ್ ಸಂಸ್ಥೆಯಲ್ಲಿ 1 ತಿಂಗಳು 4 ಚಕ್ರದ ವಾಹನ ಚಾಲನಾ ತರಬೇತಿ ಪಡೆದುಕೊಂಡು ಇದೀಗ ಸ್ವತಃ ವಾಹನ ಚಲಾಯಿಸಿಕೊಂಡು ಗ್ರಾಮದ ಮನೆ ಮನೆಯ ಕಸ ಸಂಗ್ರಹ ಮಾಡಿ ಗ್ರಾಮದ ಜನರ ಮತ್ತು ಮಹಿಳೆಯರ ಮನ ಗೆದ್ದಿದ್ದಾರೆ.
ಗ್ರಾಮ ಪಂಚಾಯತಿಯ ಒಂದು ಕಟ್ಟಡದಲ್ಲಿ ಸಂಗ್ರಹವಾದ ತ್ಯಾಜ್ಯವನ್ನು ಇಬ್ಬರು ಸಹಾಯಕರೊಂದಿಗೆ ಬೇರ್ಪಡಿಸಿ ಮಾರಾಟ ಮಾಡಿ ಬರುವ ಹಣ ಇವರ ಆದಾಯವಾಗಿದೆ .ಗ್ರಾಮ ಪಂಚಾಯತ್ ,ಜಿಲ್ಲಾ ಪಂಚಾಯತ್ ನೆರವಿನಿಂದ ವಾಹನ ಮತ್ತು ಪ್ಯಾಡ್ ಬರ್ನ್ ಯಂತ್ರವನ್ನು ಇವರಿಗೆ ನೀಡಲಾಗಿದೆ. ಇದೀಗ ಗಾಂಧಿ ಪುರಸ್ಕಾರ ಪಡೆದ ಹನೆಹಳ್ಳಿ ಗ್ರಾಮ ಪಂಚಾಯತಿ ಮಾದರಿ ಗ್ರಾಮವಾಗಿ ಮಾರ್ಪಾಡಾಗುವಲ್ಲಿ ಈ ಮಹಿಳೆಯ ಕೊಡುಗೆ ಅಪಾರ.
PublicNext
10/08/2022 10:28 am