ಸುಳ್ಯ: ಸುಬ್ರಹ್ಮಣ್ಯಕ್ಕೆ ಹೊಂದಿಕೊಂಡ ಹರಿಹರ ಬಾಳುಗೋಡು, ಕೊಲ್ಲಮೊಗ್ರು ಕಲ್ಮಕಾರು, ಬಾಳುಗೋಡು ಐನಕಿದು ಗ್ರಾಮಗಳಲ್ಲಿ ಸೋಮವಾರ ಸಂಜೆ ಭಾರಿ ಮಳೆಯಾಗಿದ್ದು, ಜಲಪ್ರಳಯವೇ ಸಂಭವಿಸಿದೆ. ಮಳೆಯ ಭೀಕರತೆಗೆ ಹರಿಹರ, ಕೊಲ್ಲಮೊಗ್ರು, ಕಲ್ಮಕಾರು, ಬಾಳುಗೋಡು ಈ ನಾಲ್ಕು ಗ್ರಾಮಗಳು ಸಂಪೂರ್ಣ ಸಂಪರ್ಕ ಕಡಿತಗೊಂಡಿದೆ.
ನಡುಗಲ್ಲು ಮೂಲಕ ಈ ನಾಲ್ಕು ಗ್ರಾಮಗಳ ತಲುಪುವ ನಡುಗಲ್ಲು ಹರಿಹರ ಮಾರ್ಗದ ಮಲ್ಲಾರ ಬಳಿ ದೊಡ್ಡ ಶಂಖ ಎಂಬಲ್ಲಿ ಸೇತುವೆ ಜಲಾವ್ರತಗೊಂಡು ಸಂಪರ್ಕ ಕಡಿತಗೊಂಡಿದೆ. ಇದೇ ಮಾರ್ಗದ ಮುಳುಗಡೆಗೊಂಡ ಸೇತುವೆ ಮೇಲೆ ಬೈಕ್ ನಲ್ಲಿ ತೆರಳುತಿದ್ದ ಕೊಲ್ಲಮೊಗ್ರು ಗ್ರಾಮದ ಸವಾರನ ಬೈಕ್ ನೀರು ಪಾಲಾಗಿದೆ. ಸವಾರ ಪ್ರಾಣಾಪಾಯದಿಂಧ ಪಾರಾಗಿದ್ದಾರೆ.
ಕಲ್ಮಕಾರು ಭಾಗದಿಂದ ಕೊಲ್ಲಮೊಗ್ರು ಹರಿಹರ ಮೂಲಕ ಹರಿಯುವ ನದಿ ತುಂಬಿ ಹರಿಯುತ್ತಿದ್ದು ಹರಿಹರ ಮುಖ್ಯ ಪೇಟೆ ಭಾಗಶಃ ಮುಳುಗಡೆಗೊಂಡಿದೆ. ಕುಕ್ಕೆ ಸುಬ್ರಮಣ್ಯದ ಆದಿ ಸುಬ್ರಮಣ್ಯ ಸಂಪೂರ್ಣ ಮುಳುಗಡೆಯಾಗಿದೆ. ಹರಿಹರದಿಂದ ಕೊಲ್ಲಮೊಗ್ರು, ಕಲ್ಮಕಾರು ಭಾಗಕ್ಕೆ ಸಂಚರಿಸುವ ರಸ್ತೆ ಹರಿಹರ ಪೇಟೆಯಿಂದ ಮುಂದಕ್ಕೆ ರಸ್ತೆ ಸಂಪೂರ್ಣ ಜಲಾವೃತಗೊಂಡಿದೆ. ಬಾಳುಗೋಡಿಗು ಸಂಪರ್ಕ ಕಡಿತವಾಗಿದೆ. ಸುಬ್ರಹ್ಮಣ್ಯ ಮಳೆಯಾಳ ಮಾರ್ಗವಾಗಿ ಹರಿಹರ ಈ ಭಾಗದ ಗುಂಡಡ್ಕ ಸೇತುವೆ ಮುಳುಗಡೆಗೊಂಡಿದೆ. ಪಲ್ಲತ್ತಡ್ಕ ಎಂಬಲ್ಲಿ ನದಿ ದಂಡೆ ಮೇಲಿನ ಎರಡು ಮನೆಗಳು ಸಂಪೂರ್ಣ ಜಲಾವ್ರತವಾಗಿದ್ದು, ಮನೆಯೊಳಗೆ ನೀರು ನುಗ್ಗಿ ನೆರೆಯಲ್ಲಿ ಕೊಚ್ಚಿಕೊಂಡು ಹೋಗಿದೆ.ಬೈಕೊಂದು ಮುಳುಗಡೆಗೊಂಡಿದೆ. ನದಿ ದಂಡೆ ಮೇಲಿನ ಮನೆಗಳು ಜಲಾವ್ರತಗೊಂಡಿವೆ, ಕೃಷಿ ತೋಟಗಳು ಸಂಪೂರ್ಣ ಜಲಾವ್ರತಗೊಂಡಿದೆ.
ನೆರೆ ಸಂದರ್ಭ ಸಾರ್ವಜನಿಕರು ಸಹಕರಿಸಿ, ಸುರಕ್ಷತೆ ಕಡೆ ಹೆಚ್ಚಿನ ಗಮನಹರಿಸಬೇಕು. ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರಕ್ಕೆ ಭೇಟಿ ನೀಡುವ ಭಕ್ತರು ಒಂದೆರಡು ದಿನಗಳು ಕಾದು ಮಳೆ ಕಡಿಮೆಯಾದ ಬಳಿಕ ಕ್ಷೇತ್ರ ಸಂದರ್ಶಿಸುವಂತೆ ದ.ಕ ಜಿಲ್ಲಾ ಉಸ್ತುವಾರಿ ಸಚಿವ ವಿ.ಸುನಿಲ್ ಕುಮಾರ್ ಮತ್ತು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ತಿಳಿಸಿದ್ದಾರೆ.
Kshetra Samachara
02/08/2022 10:48 am