ಮಂಗಳೂರು: ನಗರದ ಅಡ್ಯಾರ್-ಪಾವೂರು ಸಂಪರ್ಕ ಕೊಂಡಿಯಂತೆ ಸೇತುವೆ ನಿರ್ಮಿಸಬೇಕೆನ್ನುವ ಬೇಡಿಕೆ ಅಲ್ಲಿನ ಗ್ರಾಮಸ್ಥರಿಂದ ಬಹುಕಾಲದಿಂದ ಕೇಳಿ ಬರುತ್ತಿತ್ತು. ಇದೀಗ ಬೇಡಿಕೆ ಈಡೇರುತ್ತ ಬಂದಿದೆ. ಇನ್ನು ಮುಂದೆ ಮಂಗಳೂರು ನಗರವನ್ನು ಸಂಪರ್ಕಿಸಲು ಅಲ್ಲಿನ ಜನರು ಪಡುತ್ತಿದ್ದ ಬವಣೆ ತೀರಲಿದೆ. ಆದರೆ ನೇತ್ರಾವತಿ ನದಿಯನ್ನೇ ನಂಬಿ ಬದುಕುತ್ತಿದ್ದ ದೋಣಿ ನಡೆಸುತ್ತಿದ್ದವರಿಗೆ ಇದರಿಂದ ಚಿಂತೆ ಆರಂಭವಾಗಿದೆ.
ಒಟ್ಟು 6 ಮಂದಿಯ ಕುಟುಂಬ ದೋಣಿಗಳ ಮುಖಾಂತರ ಜನರನ್ನು ದಡ ದಾಟಿಸುವ ಮೂಲಕವೇ ಬದುಕು ಕಟ್ಟಿಕೊಂಡಿತ್ತು. ಆದರೆ, ಇದೀಗ ಸೇತುವೆ ಕಾಮಗಾರಿ ಪೂರ್ಣಗೊಂಡ ಬಳಿಕ ಈ ದೋಣಿಗಳೆಲ್ಲಾ ದಡದಲ್ಲಿ ಲಂಗರು ಹಾಕಲಿದೆ. ಸುಮಾರು 3-4 ದಶಕಗಳಿಂದ ದೋಣಿ ನಡೆಸುತ್ತಿದ್ದವರಿಗೆ ಮುಂದೇನು ಅನ್ನೋದೇ ತಿಳಿಯದಂತಾಗಿದೆ. ಜೀವನಪರ್ಯಂತ ದೋಣಿಯನ್ನೇ ಅವಲಂಬಿಸಿರುವ ಇವರ ಜೀವನ ವಯಸ್ಸಾಗುತ್ತಲೇ ಕೈ ಕೊಟ್ಟಿದೆ. ಜಿಲ್ಲಾಡಳಿತ, ಸರಕಾರದಿಂದಲೂ ಯಾವುದೇ ಸಹಾಯ ಧನ ಇವರಿಗೆ ದೊರಕಿಲ್ಲ.
ಒಟ್ಟಿನಲ್ಲಿ ಅಭಿವೃದ್ಧಿ ಅನ್ನುವುದು ಹಲವರಿಗೆ ಸಂತೋಷದ ವಿಚಾರವಾದರೆ, ಇನ್ನು ಹಲವರ ಬದುಕನ್ನೇ ಕಸಿದುಕೊಳ್ಳುತ್ತದೆ. ಇದಕ್ಕೆ ಅಡ್ಯಾರ್-ಪಾವೂರು ಸಂಪರ್ಕ ಸೇತುವೆಯೂ ಹೊರತಾಗಿಲ್ಲ. ದೋಣಿಯನ್ನೇ ನಂಬಿದ್ದ, ದಿನಂಪ್ರತಿ 500ಕ್ಕೂ ಅಧಿಕ ಮಂದಿಯನ್ನು ದಡ ಮುಟ್ಟಿಸುತ್ತಿದ್ದವರ ಬದುಕು ಈಗ ಮೂರಾಬಟ್ಟೆಯಾಗಿ ಸಂಕಷ್ಟಕ್ಕೆ ತಳ್ಳಿದೆ. ಅದೆಷ್ಟೋ ಜನರನ್ನು ಸುರಕ್ಷಿತವಾಗಿ ನದಿ ದಾಟಿಸುತ್ತಿದ್ದವರಿಗೆ ಜಿಲ್ಲಾಡಳಿತ ಮಾನವೀಯ ನೆರವು ನೀಡಿ ಒಂದು ನೆಲೆಯನ್ನ ಕಲ್ಪಿಸಬೇಕಿದೆ.
PublicNext
13/05/2022 04:13 pm