ವರದಿ: ರಹೀಂ ಉಜಿರೆ
ಕುಂದಾಪುರ: ಜಿಲ್ಲೆಯಲ್ಲಿವತ್ತು ಪುನರ್ವಸು ಮಳೆಯ ಅಬ್ಬರ ಕಡಿಮೆಯಾಗಿದೆ. ಶಾಲೆಗಳು ಪುನರಾರಂಭಗೊಂಡಿವೆ.ಆದರೆ ಹಲವು ಗ್ರಾಮಸ್ಥರ ಗೋಳು ಇನ್ನೂ ನಿಂತಿಲ್ಲ.ಅವರು ಜನಪ್ರತಿನಿಧಿಗಳ ನೆರವಿಗಾಗಿ ಕಾಯುತ್ತಿದ್ದಾರೆ.
ಮುಖ್ಯವಾಗಿ ಜಿಲ್ಲೆಯ ಬೈಂದೂರು ಕುಂದಾಪುರ ಮತ್ತು ಬ್ರಹ್ಮಾವರ ತಾಲೂಕುಗಳಲ್ಲಿ ಮಳೆಯ ದುಷ್ಪರಿಣಾಮ ಅತಿಹೆಚ್ಚು. ಭಾರಿ ಮಳೆಗೆ ತೆಕ್ಕಟ್ಟೆ ಗಾ.ಪಂ ವ್ಯಾಪ್ತಿಯ ಕುದುಬೆಟ್ಟು ಪರಿಸರ ಜಲಾವೃತ ಗೊಂಡಿದ್ದು ಈಗಲೂ ನೆರೆ ನೀರು ಪೂರ್ತಿ ಇಳಿದಿಲ್ಲ.ಸ್ಥಳೀಯ ವಿಶ್ವ ಹಿಂದೂ ಪರಿಷತ್ ಮತ್ತು ಬಜರಂಗ ದಳ ಕಾರ್ಯಕರ್ತರು ಗ್ರಾಮಸ್ಥರ ನೆರವಿಗೆಧಾವಿಸಿದ್ದಾರೆ.ಕಾರ್ಯಕರ್ತರು ಜನ ಮತ್ತು ಜಾನುವಾರುಗಳನ್ನು ರಕ್ಷಿಸಿ ಸುರಕ್ಷಿತ ಸ್ಥಳಗಳಿಗೆ ತಲುಪಿಸಿ ಮಾನವೀಯತೆ ಮೆರೆದಿದ್ದಾರೆ.ಈ ಭಾಗದ ಗ್ರಾಮಸ್ಥರ ಪ್ರಕಾರ ಈತನಕ ಇಲ್ಲಿಗೆ ಯಾವ ಜನಪ್ರತಿನಿಧಿಗಳೂ ಭೇಟಿ ಕೊಟ್ಟಿಲ್ಲವಂತೆ.
ತೆಕ್ಕಟ್ಟೆಯ ಕುದ್ರುಬೈಲು ಪರಿಸರದ ಹಲವು ಮನೆಗಳಿಗೆ ಅಪಾರ ಪ್ರಮಾಣದಲ್ಲಿ ನೆರೆ ನೀರು ನುಗ್ಗಿ ನಿತ್ಯೋಪಯೋಗಿ ವಸ್ತುಗಳು ನೀರುಪಾಲಾಗಿವೆ. ನೂರಾರು ಎಕರೆ ಕೃಷಿ ಭೂಮಿಗಳು ಜಲಾವೃತಗೊಂಡು ಕೃಷಿ ಸಂಪೂರ್ಣ ಕೊಳೆತು ಹೋಗಿವೆ.ಇದರಿಂದ ಅಪಾರ ಹಾನಿ ಸಂಭವಿಸಿದೆ. ಕುದ್ರುಬೈಲು ಪರಿಸರದಲ್ಲಿ ಕೊಜೆ ಹೊಂಡವಲ್ಲದೇ ಹೊಳೆಸಾಲಿನ ದಂಡೆ ಒಡೆದು ಬೃಹತ್ ಪ್ರಮಾಣದಲ್ಲಿ ನೆರೆ ನೀರು ನುಗ್ಗಿ ಹೆಚ್ಚಿನ ಅನಾಹುತ ಸಂಭವಿಸಿದೆ. ಈ ಪರಿಸರದಲ್ಲಿ ಸರಿಯಾದ ಯಾವುದೇ ರಸ್ತೆ ಸೌಕರ್ಯಗಳಿಲ್ಲದೇ ಸ್ಥಳೀಯರು ಕೃತಕ ನೆರೆಯಿಂದ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿತ್ತು.
ಇವತ್ತು ಮುಖ್ಯಮಂತ್ರಿಗಳು ಜಿಲ್ಲೆಗೆ ಭೇಟಿ ನೀಡಿ ನಾಳೆ ಮಳೆಹಾನಿಪ್ರದೇಶಗಳಿಗೆ ಭೇಟಿ ನೀಡಿ ಸಭೆ ನಡೆಸಲಿದ್ದಾರೆ. ಮಳೆಯಿಂದಾದ ಹಾನಿಗೆ ಸಿಎಂ ವಿಶೇಷ ಪ್ಯಾಕೇಜ್ ಘೋಷಿಸುವ ನಿರೀಕ್ಷೆಯಲ್ಲಿದ್ದಾರೆ ಈ ಭಾಗದ ಗ್ರಾಮಸ್ಥರು.
PublicNext
12/07/2022 06:38 pm