ಉಳ್ಳಾಲ: ಸೋಮೇಶ್ವರ ಉಚ್ಚಿಲದ ಬಟ್ಟಪ್ಪಾಡಿ ಪ್ರದೇಶದಲ್ಲಿ ಕಡಲ್ಕೊರೆತ ಮುಂದುವರೆದಿದ್ದು ಗೆಸ್ಟ್ ಹೌಸ್ ಮಾಲೀಕರು ಮಾತ್ರ ಸಮದ್ರಕ್ಕೆ ಕಲ್ಲು ಹಾಕಿ ತಮ್ಮ ಕಟ್ಟಡ ರಕ್ಷಿಸಲು ಮುಂದಾಗಿದ್ದು ಸ್ಥಳೀಯರು ಇದನ್ನ ವಿರೋಧಿಸಿ ಕಾಮಗಾರಿ ಸ್ಥಗಿತಗೊಳಿಸಿದ್ದಾರೆ.
ಬಟ್ಟಪ್ಪಾಡಿಯಲ್ಲಿ ಕಡಲ್ಕೊರೆತದ ತೀವ್ರತೆಗೆ ಬೀಚ್ ರಸ್ತೆಯೇ ಅಳಿದು ಹೋಗಿದ್ದು ಸುಮಾರು ಐವತ್ತರಷ್ಟು ಮನೆಗಳು ಅಪಾಯದಲ್ಲಿವೆ. ತೀರದಲ್ಲಿರುವ Vitamin sea (ವಿಟಮಿನ್ ಸೀ) ಎಂಬ ಗೆಸ್ಟ್ ಹೌಸ್ ಕೂಡ ಈಗ ಸಮುದ್ರಪಾಲಾಗುವ ಭೀತಿಯಲ್ಲಿದ್ದು ಅದರ ಮಾಲೀಕರು ಕಟ್ಟಡ ಉಳಿಸಲಿಕ್ಕಾಗಿ ಸಮುದ್ರಕ್ಕೆ ಹಿಟಾಚಿ ಯಂತ್ರದ ಮೂಲಕ ಕಲ್ಲು ಹಾಕಿದ್ದಾರೆ. ಸರಕಾರಿ ಜಾಗದಲ್ಲಿ ಖಾಸಗಿಯವರು ನಿಯಮ ಉಲ್ಲಂಘಿಸಿ ರಕ್ಷಣಾ ಕಾರ್ಯ ನಡೆಸುವುದನ್ನ ವಿರೋಧಿಸಿದ ಸ್ಥಳೀಯರು ಕಾಮಗಾರಿಯನ್ನ ಸ್ಥಗಿತಗೊಳಿಸಿದ್ದು ತಹಶೀಲ್ದಾರ್ ಅವರಿಗೆ ಈ ಬಗ್ಗೆ ದೂರು ನೀಡಿದ್ದಾರೆ.
ಗೆಸ್ಟ್ ಹೌಸ್ ಮಾಲೀಕರ ವಿರುದ್ಧ ಕೇಸ್ ದಾಖಲಿಸುವುದಾಗಿ ತಹಶೀಲ್ದಾರ್ ಸ್ಥಳೀಯರಲ್ಲಿ ಹೇಳಿದ್ದಾರಂತೆ. ಸ್ಥಳೀಯರಾದ ಸುನಿಲ್ ಉಚ್ಚಿಲ್ ಪ್ರತಿಕ್ರಿಯಿಸಿದ್ದು ಬಡಪಾಯಿಗಳ ಮನೆಗಳ ರಕ್ಷಣೆಗೆ ಇಷ್ಟು ದಿವಸಗಳಲ್ಲಿ ಸರಕಾರವು ಸಣ್ಣ ರಕ್ಷಣಾ ಕಾರ್ಯವನ್ನು ಮಾಡಿಲ್ಲ.ಖಾಸಗಿಯವರು ಇಲ್ಲಿ ಅಕ್ರಮ ಗೆಸ್ ಹೌಸ್ಗಳನ್ನು ನಿರ್ಮಿಸಿ ದರ್ಪ ಮೆರೆಯುತ್ತಿರುವುದು ಎಷ್ಟು ಸರಿ ಎಂದು ಪ್ರಶ್ನಿಸಿದ್ದಾರೆ.
ಬಟ್ಟಪ್ಪಾಡಿ ಕಡಲ್ಕೊರೆತ ಪ್ರದೇಶಕ್ಕೆ ಇಂದು ಜಿಲ್ಲಾ ಉಸ್ತುವಾರಿ ಸಚಿವರಾದ ಸುನಿಲ್ ಕುಮಾರ್ ಮತ್ತು ಕಂದಾಯ ಸಚಿವ ಆರ್.ಅಶೋಕ್ ಭೇಟಿ ನೀಡಲಿದ್ದು ಕಡಲ್ಕೊರೆತ ತಡೆಗೆ ಯಾವ ಅಸ್ತ್ರ ಪ್ರಯೋಗಿಸುತ್ತಾರೆಂದು ನೋಡಬೇಕಿದೆ.
Kshetra Samachara
07/07/2022 01:08 pm