ಉಪ್ಪಿನಂಗಡಿ: ದಕ್ಷಿಣ ಕನ್ನಡ ಜಿಲ್ಲೆಯ ಪ್ರಮುಖ ತೀರ್ಥ ಕ್ಷೇತ್ರವಾಗಿರುವ ಸುಬ್ರಹ್ಮಣ್ಯಕ್ಕೆ ಉಪ್ಪಿನಂಗಡಿಯಿಂದ ಸಂಪರ್ಕ ಕಲ್ಪಿಸುವ ಹಳೆಗೇಟು- ಮರ್ಧಾಳ ರಾಜ್ಯ ಹೆದ್ದಾರಿಯ ಪೆರಿಯಡ್ಕ ಎಂಬಲ್ಲಿ ಹೆದ್ದಾರಿಯಲ್ಲೇ ಬೃಹತ್ ಖೆಡ್ಡಾಗಳು ನಿರ್ಮಾಣವಾಗಿದ್ದು, ಇದು ವಾಹನ ಸವಾರರಿಗೆ ಅಪಾಯವನ್ನು ತಂದೊಡ್ಡಿದೆ.
ಈ ರಾಜ್ಯ ಹೆದ್ದಾರಿಯಲ್ಲಿ ಹಳೆಗೇಟುವಿನಿಂದ ಕೊಯಿಲ ತನಕದ ಆರು ಕಿ.ಮೀ. ರಸ್ತೆ ವಿಸ್ತರಣಾ ಕಾಮಗಾರಿಗೆ ನಾಲ್ಕು ವರ್ಷದ ಹಿಂದೆ 7.25 ಕೋಟಿ ರೂಪಾಯಿ ಮಂಜೂರಾಗಿತ್ತು. ಇದರ ಗುತ್ತಿಗೆಯನ್ನು ಮಂಗಳೂರಿನ ಖಾಸಗಿ ಕಂಪೆನಿಯೊಂದು ಪಡೆದಿದ್ದು, ತೀರಾ ಕಳಪೆ ಹಾಗೂ ಅಪೂರ್ಣ ಕಾಮಗಾರಿ ನಡೆಸಿದ್ದರಿಂದ ಪಿಡಬ್ಲ್ಯೂಡಿ ಇಲಾಖೆಯು ಆ ಕಂಪೆನಿಯನ್ನು ಕಪ್ಪು ಪಟ್ಟಿ (ಬ್ಲೇಕ್ ಲೀಸ್ಟ್)ಗೆ ಸೇರಿಸಿತ್ತು. ಆ ಬಳಿಕ ಇದರ ಕಾಮಗಾರಿ ಪೂರ್ಣಗೊಳಿಸುವುದಾಗಲಿ, ಕಳಪೆ ಕಾಮಗಾರಿಯನ್ನು ಸರಿಪಡಿಸುವ ಕೆಲಸವಾಗಲಿ ಯಾರೂ ಮಾಡಿಲ್ಲ. ಇದಕ್ಕೆ ಬಿಡುಗಡೆಯಾದ ಅನುದಾನ ಮಾತ್ರ ಏನಾಗಿದೆ ಎಂಬುದಕ್ಕೆ ಯಾರಲ್ಲೂ ಉತ್ತರವಿಲ್ಲ.
ಮಳೆಗಾಲದಲ್ಲಂತೂ ಜೀವ ಕೈಯಲ್ಲಿ ಹಿಡಿದುಕೊಂಡೇ ಈ ರಸ್ತೆಯಲ್ಲಿ ಓಡಾಡ ಬೇಕು. ಇಲ್ಲಿ ಅರ್ಧಂಬರ್ಧ ಕಾಮಗಾರಿ ನಡೆಸಿ ಕಪ್ಪು ಪಟ್ಟಿಗೆ ಸೇರಿದ ಕಂಪನಿ ಬೇರೊಂದು ಹೆಸರಲ್ಲಿ ಬೇರೆ ಸರಕಾರಿ ಗುತ್ತಿಗೆಗಳನ್ನು ಪಡೆದುಕೊಂಡು ನಿರಾತಂಕವಾಗಿ ಕೆಲಸ ನಡೆಸುತ್ತಿದೆ. ಇನ್ನು ವಾರದೊಳಗೆ ಇದಕ್ಕೆ ಶಾಶ್ವತ ಪರಿಹಾರ ಕಲ್ಪಿಸದಿದ್ದಲ್ಲಿ ರಸ್ತೆ ತಡೆ ನಡೆಸಿ ಪ್ರತಿಭಟನೆ ನಡೆಸುವುದಾಗಿ ನಾಗರೀಕರು ಎಚ್ಚರಿಸಿದ್ದಾರೆ.
Kshetra Samachara
24/06/2022 05:28 pm