ಸುಳ್ಯ: ಸುಳ್ಯದ ಬಾಳುಗೋಡು ಗ್ರಾಮದ ಉಪ್ಪುಕಳದ 11 ಮನೆಗಳ 49 ಮಂದಿ ದಿನನಿತ್ಯದ ಪ್ರಯಾಣಕ್ಕಾಗಿ ಅರೆಕಾ ಮತ್ತು ಜಂಗಲ್ ಮರ ಬಳಸಿ ನಿರ್ಮಿಸಿರುವ ಮರದ ಸೇತುವೆಯನ್ನೇ ಅವಲಂಬಿಸಿದ್ದಾರೆ. ಇದೀಗ ಕರಾವಳಿ ಜಿಲ್ಲೆಗಳಲ್ಲಿ ಪ್ರತಿನಿತ್ಯ ಭಾರಿ ಮಳೆಯಾಗುತ್ತಿದ್ದು, ನದಿಗಳಲ್ಲಿ ನೀರಿನ ಮಟ್ಟವೂ ಏರಿ ಅಪಾಯದ ಮಟ್ಟದಲ್ಲಿದೆ. ಈ ನಡುವೆ ಉಪ್ಪುಕಳದಲ್ಲಿ ಕುಮಾರಧಾರ ನದಿಗೆ ಸೇರುವ ಕಿರುನದಿಗೆ ಅಡ್ಡಲಾಗಿ 25 ಮೀ. ಉದ್ದ, 1 ಮೀ. ಅಗಲದ ಮರದ ಸೇತುವೆ ನಿರ್ಮಿಸಲಾಗಿದೆ.
ಇಲ್ಲೊಂದು ಸೇತುವೆಗಾಗಿ ಗ್ರಾಮಸ್ಥರು ಹಲವು ವರ್ಷಗಳಿಂದಲೂ ಬೇಡಿಕೆ ಸಲ್ಲಿಸುತ್ತಿದ್ದಾರೆ. ಉಪ್ಪುಕಳ ಗ್ರಾಮ, ಸುಳ್ಯ ತಾಲೂಕಿನ ಹರಿಹರಪಳ್ಳತ್ತಡ್ಕ ಗ್ರಾಪಂ ವ್ಯಾಪ್ತಿಯಲ್ಲಿದೆ. ಇಲ್ಲಿ 24 ಮನೆಗಳಿದ್ದು, 90ಕ್ಕೂ ಹೆಚ್ಚು ನಿವಾಸಿಗಳಿದ್ದಾರೆ. ಇವುಗಳಲ್ಲಿ 11 ಮನೆಗಳು ನದಿಯ ಇನ್ನೊಂದು ಬದಿಯಲ್ಲಿದ್ದು, ಸ್ಥಳೀಯರು ಈ ನದಿ ದಾಟಲು ಅಪಾಯಕಾರಿ ಈ ಮರದ ಸೇತುವೆಯನ್ನು ಅವಲಂಬಿಸಿದ್ದಾರೆ.
ಪಡಿತರ ಸಹಿತ ದಿನನಿತ್ಯದ ಅಗತ್ಯಕ್ಕೆ ಈ ಸೇತುವೆ ಮೂಲಕ ಬಾಳುಗೋಡು ಗ್ರಾಮಕ್ಕೆ ತೆರಳಲು ಕೆಸರಿನ ರಸ್ತೆಯಲ್ಲಿ ಐದಾರು ಕಿ.ಮೀ. ಸಂಚರಿಸಬೇಕಿದೆ. ಈ ಪ್ರದೇಶ ದ.ಕ.- ಕೊಡಗು ಜಿಲ್ಲೆಯ ಗಡಿಯಾಗಿದೆ. ಇಲ್ಲಿನ ಜನರಿಗೆ 1.5 ಕಿ.ಮೀ. ಕಾಲ್ನಡಿಗೆಯ ಪರ್ಯಾಯ ಇನ್ನೊಂದು ಮಾರ್ಗವಿದೆ.
ಆದರೂ, ಈ ಮಾರ್ಗ ಮೀಸಲು ಅರಣ್ಯದಂಚಿನಲ್ಲಿದೆ. ಹೀಗಾಗಿ ಗ್ರಾಮಸ್ಥರ ಸುರಕ್ಷಿತ ಯಾನಕ್ಕೆ ಈ ಅಪಾಯಕಾರಿ ಸೇತುವೆ ಬದಲು ಉತ್ತಮವಾದ ಸೇತುವೆ ನಿರ್ಮಿಸುವುದೊಂದೇ ಪರಿಹಾರ ಎಂಬುದು ಗ್ರಾಮಸ್ಥರ ಅಭಿಪ್ರಾಯವಾಗಿತ್ತು. ಆದರೆ, ದುರಾದೃಷ್ಟ ಎಂಬಂತೆ ಈ ಸೇತುವೆ ನಿನ್ನೆ ರಾತ್ರಿ ನೀರಿನ ರಭಸಕ್ಕೆ ಕೊಚ್ಚಿ ಹೋಗಿದೆ!
ಸ್ಥಳೀಯರು ಹೊಸ ಸೇತುವೆ ನಿರ್ಮಾಣಕ್ಕಾಗಿ ಈಗ ಪ್ರತಿಭಟನೆಗೆ ಮುಂದಾಗಿದ್ದು, ಸ್ಥಳಕ್ಕೆ ಜಿಲ್ಲಾಧಿಕಾರಿಗಳು ಭೇಟಿ ನೀಡಿ, ಸೇತುವೆ ನಿರ್ಮಾಣದ ಲಿಖಿತ ಭರವಸೆ ನೀಡದೇ ಪ್ರತಿಭಟನೆ ಹಿಂಪಡೆಯುವುದಿಲ್ಲವೆಂದು ತಿಳಿಸಿದ್ದಾರೆ.
Kshetra Samachara
10/07/2022 05:23 pm